

ಯಳಂದೂರು: ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಕ್ಕೆ ಸೋಮವಾರ(ಅ.28)ಮತದಾನ ನಡೆಯಲಿದೆ.
ಮತದಾನಕ್ಕಾಗಿ ಚುನಾವಣಾಧಿಕಾರಿಯೂ ಆಗಿರುವ ತಹಸೀಲ್ದಾರ್ ಜಯಪ್ರಕಾಶ್ ನೇತೃತ್ವದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಒಟ್ಟು 29 ನಿರ್ದೇಶಕರು ಇರುವ ಸರ್ಕಾರಿ ನೌಕರರ ಸಂಘದಲ್ಲಿ ಈಗಾಗಲೇ 19 ಜನರು ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನುಳಿದ 10 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಪಟ್ಟಣದ ತಹಸೀಲ್ದಾರ್ ಕಚೇರಿ ಹಾಗೂ ಚುನಾವಣಾ ಶಾಖೆಯಲ್ಲಿ 2 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 569 ಸರ್ಕಾರಿ ನೌಕರರು ತಾಲೂಕಿನಲ್ಲಿದ್ದಾರೆ. ಇದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇತ್ರದ 4 ಸ್ಥಾನಗಳಿಗೆ 8 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಪ್ರೌಢಶಾಲಾ ಶಿಕ್ಷಕರ ವಿಭಾಗದ ಒಂದು ಸ್ಥಾನಕ್ಕೆ ಇಬ್ಬರು, ಕಂದಾಯ ಇಲಾಖೆಯ 3 ಸ್ಥಾನಕ್ಕೆ ಐವರು, ಅರಣ್ಯ ಇಲಾಖೆಯ ಒಂದು ಸ್ಥಾನಕ್ಕೆ ಇಬ್ಬರು ಹಾಗೂ ತಾಲೂಕು ಪಂಚಾಯಿತಿಯ ಒಂದು ಸ್ಥಾನಕ್ಕೆ ಇಬ್ಬರು ಅಂತಿಮ ಕಣದಲ್ಲಿದ್ದಾರೆ. 10 ನಿರ್ದೇಶಕರಿಗೆ ಒಟ್ಟು 19 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ತಾಲೂಕು ಸರ್ಕಾರಿ ನೌಕರರ ಸಂಘದ ಒಟ್ಟು 29 ನಿರ್ದೇಶಕ ಸ್ಥಾನಗಳಲ್ಲಿ 19 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ 10 ನಿರ್ದೇಶಕರಿಗೆ ಮತದಾನ ಸೋಮವಾರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೆ ನಡೆಯಲಿದೆ. ಇದಕ್ಕಾಗಿ 2 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಇಬ್ಬರು ಎಆರ್‌ಒಗಳು ಇರಲಿದ್ದು, ಪ್ರತಿ ಮತಗಟ್ಟೆಗೂ ಒಬ್ಬ ಪಿಆರ್‌ಒ, ಒಬ್ಬ ಎಪಿಆರ್‌ಒ ಒಬ್ಬರು ಡಿ.ಗುಂಪಿನ ನೌಕರರು, ಒಬ್ಬ ಸಹಾಯಕ ಇರಲಿದ್ದಾರೆ. ಈ ಚುನಾವಣೆಯಲ್ಲಿ ಎಡಗೈನ ಕಿರು ಬೆರಳಿಗೆ ಚುನಾವಣೆಯ ಶಾಯಿ ಗುರುತನ್ನು ಹಾಕಲಾಗುವುದು, 4 ಗಂಟೆಯ ನಂತರ ಮತ ಎಣಿಕೆ ನಡೆಯಲಿದ್ದು ಫಲಿತಾಂಶವನ್ನು ಸೋಮವಾರವೇ ಪ್ರಕಟಿಸಲಾಗುವುದು.
ಜಯಪ್ರಕಾಶ್, ಚುನಾವಣಾಧಿಕಾರಿ