

ಹುಳಿಯಾರು : ಅಭಿವೃದ್ಧಿ ಕೆಲಸಗಳ ಪಟ್ಟಿ ಪಡೆಯಲು ಪಟ್ಟಣ ಪಂಚಾಯಿತಿ ಕಚೇರಿಗೆ ಆಗಮಿಸಿದ ಪೌರಾಡಳಿತ ಇಲಾಖೆಯ ಯೋಜನಾ ನಿರ್ದೇಶಕರ ಸಮ್ಮುಖದಲ್ಲೇ ಪಪಂ ಸದಸ್ಯರು ಹಾಗೂ ಮುಖ್ಯಾಧಿಕಾರಿ ನಡುವೆ ಆರೋಪ ಪ್ರತ್ಯಾರೋಪ, ಕೂಗಾಟ ತಳ್ಳಾಟ ನಡೆಯಿತು.
ಪಪಂ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸದಸ್ಯರ ಸಭೆಯಲ್ಲಿ ಯೋಜನಾ ನಿರ್ದೇಶಕ ಅಂಜಿನಪ್ಪ, ಬ್ಲಾಕ್‌ನಲ್ಲಿ ಆಗಬೇಕಿರುವ ಕೆಲಸಗಳ ವಿವರ ನೀಡುವಂತೆ ಕೇಳಿದರು. ಈ ವೇಳೆ ಪಪಂ ಅಧ್ಯಕ್ಷ ಕೆ.ಎಂ.ಎಲ್ ಕಿರಣ್, ನೀವು ಬರುವ ವಿಷಯವೇ ನಮಗೆ ತಿಳಿದಿಲ್ಲ. ಏಕಾಏಕಿ ಮಾಹಿತಿ ಕೊಡಿ ಎಂದರೆ ಸದಸ್ಯರನ್ನು ಸೇರಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ವಾರದ ಮುಂಚೆಯೇ ನಾನು ಬರುವ ಮಾಹಿತಿ ಇ-ಮೇಲ್‌ನಲ್ಲಿ ಕಳುಹಿಸಿದ್ದೇ ಎಂದು ಯೋಜನಾ ನಿರ್ದೇಶಕ ಆಂಜಿನಪ್ಪ ತಿಳಿದಾಗ, ಮುಖ್ಯಾಧಿಕಾರಿ ಮಂಜುನಾಥ್ ತಮಗೆ ಯಾವುದೇ ಮೇಲ್ ಬಂದಿಲ್ಲ ಎಂದು ಸಮಜಾಯಿಷಿ ನೀಡಿದರು. ಇದರಿಂದ ಆರಂಭವಾದ ಪರಸ್ಪರ ವಾಗ್ವಾದ ಕ್ರಮೇಣ ಮುಂದುವರಿಯಿತು.
ಸಭೆಯ ಅಜೆಂಡಾದಲ್ಲಿರುವ ವಿಷಯ ಚರ್ಚಿಸಲು ಸೂಕ್ತ ದಾಖಲೆಗಳನ್ನೇ ನೀಡದೆ ಕಾಟಾಚಾರಕ್ಕೆ ಸಭೆ ಕರೆಯುತ್ತಾರೆ. ಇದಕ್ಕೆ ಬುಧವಾರ ನಡೆದ ಸಭೆಯಲ್ಲಿ 18 ಸಾವಿರ ರೂಪಾಯಿ ಬಿಲ್ ತೋರಿಸುವಂತೆ ಕೇಳಿದಾಗ ಸಮಯವಕಾಶ ಕೇಳಿಕೊಂಡರು ಎಂಬ ಸದಸ್ಯ ಎಸ್‌ಆರ್‌ಎಸ್ ದಯಾನಂದ್ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ, ಆ ಬಿಲ್ ಅಧ್ಯಕ್ಷರ ಬಳಿಯಿದೆ ಎಂದರು. ಇದಕ್ಕೆ ಅಧ್ಯಕ್ಷರು ನಾನ್ಯಾಕೆ ಬಿಲ್ ಫೈಲ್ ತೆಗೆದುಕೊಂಡು ಹೋಗಲಿ ಎಂದು ಮುಖ್ಯಾಧಿಕಾರಿ ವಿರುದ್ಧ ತಿರುಗಿ ಬಿದ್ದಾಗ ಸಭೆಯಲ್ಲಿ ಗದ್ದಲ ಸೃಷ್ಟಿಯಾಯಿತು.
ಪಪಂ ವಾಣಿಜ್ಯ ಮಳಿಗೆಗಳ ಬಾಡಿಗೆಗಳನ್ನು ಏಕಾಏಕಿ ಹೆಚ್ಚಿಸಿದ ವಿಚಾರ ನ್ಯಾಯಾಲಯದಲ್ಲಿದ್ದರೂ ಬಾಡಿಗೆ ಕಟ್ಟಿಸಿಕೊಳ್ಳುತ್ತಿದ್ದಾರೆ. ಇ-ಹರಾಜಿನ ಮೂಲಕ ಒಂದು ಮಳಿಗೆ 16,980 ರೂ. ಮಾಸಿಕ ಬಾಡಿಗೆಗೆ ಹರಾಜು ಆಗಿದ್ದು, ಉಳಿದ ಮಳಿಗೆಗಳಿಗೆ ಇದೇ ಬಾಡಿಗೆ ಫಿಕ್ಸ್ ಮಾಡಿದ್ದರೂ ಲಕ್ಷಾಂತರ ರೂ. ಆದಾಯ ಬರುತ್ತಿತ್ತು. ಈಗ ಆದಾಯ ನಷ್ಟಕ್ಕೆ ಮುಖ್ಯಾಧಿಕಾರಿ ನೇರ ಹೊಣೆಯಾಗಿದ್ದಾರೆ ಎಂದು ಎಂದು ಸದಸ್ಯ ಫ್ರೋಟ್ ಸಿದ್ಧಿಕ್ ಆರೋಪಿಸಿದರು.
ಪಂಚಾಯಿತಿಯಿಂದ ಮಳಿಗೆ ಬಾಡಿಗೆ ಪಡೆದ ಕೆಲವರು ಲಕ್ಷಾಂತರ ರೂ.ಗಳಿಗೆ ಮತ್ತೊಬ್ಬರಿಗೆ ಕಾನೂನು ಬಾಹಿರವಾಗಿ ಪರಭಾರೆ ಮಾಡಿಕೊಟ್ಟಿದ್ದಾರೆ. ಅಲ್ಲದೆ ಅಂಗಡಿಗಳ ಮುಂದೆ ಹಣ್ಣಿನ ಅಂಗಡಿ ಇಟ್ಟುಕೊಳ್ಳಲು ದಿನಕ್ಕೆ 600 ರೂ.ನಂತೆ ಬಾಡಿಗೆ ಪಡೆಯುತ್ತಿದ್ದಾರೆ ಎಂದು ಸದಸ್ಯ ಜುಬೇರ್ ಕುಟುಕಿದರು. ತಡೆಯಾಜ್ಞೆ ತಂದಿದ್ದ ಮಳಿಗೆದಾರರು ಕೋರ್ಟ್‌ಗೆ ಹಾಜರಾಗದೆ ವಿಚಾರಣೆ ಮುಂದಕ್ಕೆ ಹೋಗುತ್ತಿದೆ. ಮುಂದಿನ ಬಾರಿ ಪಪಂ ಪರವಾಗಿ ಆದೇಶ ಹೊರಬರಲಿದೆ ಎಂದು ವಕೀಲರು ತಿಳಿಸಿರುವುದಾಗಿ ಮುಖ್ಯಾಧಿಕಾರಿ ಹೇಳಿದರು.
ಮುಖ್ಯಾಧಿಕಾರಿ ವರ್ಗಾವಣೆ ಮಾಡಿದಿದ್ದರೆ ಕಚೇರಿಗೆ ಬೀಗ : ಯೋಜನಾ ನಿರ್ದೇಶಕರ ಎದುರಿನಲ್ಲೇ ಅಸಭ್ಯವಾಗಿ ವರ್ತಿಸುವ ಮುಖ್ಯಾಧಿಕಾರಿಗಳನ್ನು ತಕ್ಷಣ ವರ್ಗಾವಣೆ ಮಾಡಬೇಕು. ಇಲ್ಲವಾದರೆ ಕಚೇರಿಗೆ ಬೀಗ ಜಡಿಯುತ್ತೇವೆ ಎಂದು ಸದಸ್ಯರು ಒತ್ತಾಯಿಸಿದರು. ಅಲ್ಲದೆ ಕಚೇರಿ ಕಡತಗಳು ಕಾಣೆಯಾಗುತ್ತಿದ್ದು, ಈ ಸಂಬಂಧ ಮುಖ್ಯಾಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಸದಸ್ಯರು ಪಟ್ಟುಹಿಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಾಧಿಕಾರಿ ಮಂಜುನಾಥ್, ಹೇಳಿದಕ್ಕೆಲ್ಲಾ ಸಹಿ ಹಾಕಿದರೆ ನನ್ನನ್ನು ಮೆಚ್ಚುತ್ತಾರೆ. ಆಧಾರ ರಹಿತವಾಗಿ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ ಎಂದರು.
ಲಂಚ ಪಡೆದಿದ್ದಾರೆ : ಈ ಹಿಂದಿನ ಪಿಡಿಒ ಸಿದ್ಧರಾಮಯ್ಯ ಅವರ ಸಹಿಯನ್ನು ನಕಲು ಮಾಡಿ ಅಕ್ರಮವಾಗಿ 60ಕ್ಕೂ ಹೆಚ್ಚು ಖಾತೆ ಮಾಡಿ, ಹಣ ಪಡೆದು ನೂರಾರು ಮಂದಿಗೆ ಎನ್‌ಒಸಿ ನೀಡಿದ್ದಾರೆ. ನಮೂನೆ 3 ಕೊಡಲು 3 ಸಾವಿರ ರೂ. ಲಂಚ ಫಿಕ್ಸ್ ಮಾಡಿದ್ದಾರೆ ಎಂದು ಸದಸ್ಯ ಚಂದ್ರಶೇಖರ್, ಮಾಜಿ ಸದಸ್ಯ ರೇವಣ್ಣ ಗಂಭೀರ ಆರೋಪ ಮಾಡಿದಾಗ, ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ, ಯಾರಿಂದಲೂ ನಾನು ಲಂಚ ಪಡೆದಿಲ್ಲ. ನಿಮ್ಮ ಮೇಲೆ ಮಿನಿಸ್ಟರ್ ಬಳಿ ಹಣ ಕೇಳಿರುವ ಆರೋಪ ಹೇಳಿದ್ದಾರೆ ಗೊತ್ತಾ ಎಂದಾಗ ಸಭೆ ರಣರಂಗವಾಗಿ ಮಾರ್ಪಟ್ಟಿತು. ಚುನಾಯಿತ ಸದಸ್ಯರ ಮೇಲೆ ಆರೋಪ ಮಾಡುತ್ತೀಯಾ ಎಂದು ಕೆಲ ಸದಸ್ಯರು ಮುಖ್ಯಾಧಿಕಾರಿ ಮೇಲೆ ಟೇಬಲ್ ಗುದ್ದಿ ಎರಗಿದರು. ನಂತರ ಅಲ್ಲಿದ್ದ ಉಳಿದ ಅಧಿಕಾರಿಗಳು ಎಲ್ಲರನ್ನೂ ಸಮಾಧಾನ ಮಾಡಿದರು.