

ಕಲಬುರಗಿ: ರಾಜ್ಯದಲ್ಲಿ ರಂಗಾಯಣಗಳ ನಿರ್ದೇಶಕರನ್ನು ಸಚಿವರು ನಿಯಮ ಮೀರಿ ನೇಮಕ ಮಾಡಿದ್ದಾರೆ. ಈ ಬಗ್ಗೆ ಕಾನೂನಾತ್ಮಕವಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಜನರಂಗದ ಅಧ್ಯಕ್ಷ, ಹಿರಿಯ ರಂಗ ನಿರ್ದೇಶಕ ಶಂಕ್ರಯ್ಯ ಘಂಟಿ ಆಗ್ರಹಿಸಿದರು.
ರಂಗಾಯಣಗಳಿಗೆ ಅನುಭವಿ, ರಂಗ ಕ್ಷೇತ್ರದ ಹಿರಿಯರನ್ನು ನೇಮಿಸುವುದು ವಾಡಿಕೆ. ರಂಗ ಸಮಾಜದವರು, ಸತ್ಯ ಶೋಧನಾ ಸಮಿತಿ ಶಿಫಾರಸ್ಸು ಮಾಡಿದವರನ್ನು ನೇಮಿಸಬೇಕು. ಆದರೆ ಪ್ರಸ್ತುತ ನೇಮಕದಲ್ಲಿ ಈ ನಿಯಮಗಳನ್ನು ಮೀರಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ರಂಗ ಸಮಾಜದ ಶಿÁರಸ್ಸು ಪಾಲನೆ ಮಾಡಿಲ್ಲ. ಸಾಹಿತಿಗಳು, ನಾಟಕ ರಚನೆಕಾರರು, ರಂಗ ನಿರ್ದೇಶಕರು, ಕಲಾವಿದರು ಮತ್ತು ಸಂಘಟಕರನ್ನು ಶೋಧಿಸಿ ರಂಗಾಯಣದ ಮಾರ್ಗದರ್ಶನಕ್ಕಾಗಿ ರಂಗ ಸಮಾಜದ ಸದಸ್ಯರನ್ನು ನೇಮಿಸಲಾಗುತ್ತದೆ. ಆದರೆ ರಂಗಾಯಣದAತ ಕ್ರಿಯಾಶೀಲ ಸಂಸ್ಥೆಗೆ ಮಾನದಂಡಗಳಿಲ್ಲದೆ, ನಾಡಿನ ಸಾಂಸ್ಕೃತಿಕ ಮಾನ ಮರ್ಯಾದೆ ಹರಾಜಿಗೆ ಇಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಂಗ ಸಮಾಜವು ಶಿÁರಸು ಮಾಡಿದ ಹೆಸರುಗಳನ್ನು ಹೊರತುಪಡಿಸಿ ಬೇರೆಯವರ ಹೆಸರು ನಿರ್ದೇಶಕರ ಸ್ಥಾನಕ್ಕೆ ಪರಿಗಣಿಸಲಾಗಿದೆ. ನಿರ್ದೇಶಕರ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಅರ್ಹ ಅಭ್ಯರ್ಥಿಗಳ ವೃತ್ತಿ ಅನುಭವ, ರಂಗ ರಚನೆ, ಕೊಡುಗೆ ನಿರ್ಲಕ್ಷಿಸಲಾಗಿದೆ. ಪ್ರಸ್ತುತ ನೇಮಕದಲ್ಲಿ ಸಚಿವರ ಸ್ವಹಿತಾಸಕ್ತಿ ಎದ್ದು ಕಾಣುತ್ತಿದ್ದು, ಅಸಂವಿಧಾನಿಕ ನಡೆಗೆ ಮುಖ್ಯಮಂತ್ರಿಗಳು ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಂಗಕರ್ಮಿಗಳಾದ ಆಶಾ ಕಂತಿ, ಸುಮಿತ್ರಾ, ಸಾಗರ, ಸಂಪತ, ಎಂ,ಬಿ.ಸಜ್ಜನ್ ಇದ್ದರು.