

ಮೈಸೂರು: ‘ನಿರ್ದಿಗಂತ’ದಿಂದ ನಿರ್ಮಾಣವಾಗಿರುವ ‘ಗಾಯಗಳು’ ನಾಟಕ ಜು.29 ರಿಂದ ಪ್ರದರ್ಶನವಾಗಲಿದೆ ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು.
ಸಂಜೆ 6ಕ್ಕೆ ಮೈಸೂರಿನ ರಾಮಕೃಷ್ಣನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಮೊದಲ ಪ್ರದರ್ಶನ, ಆ.1 ರಂದು ಸಂಜೆ 7ಕ್ಕೆ ಕಲಾಮಂದಿರದ ಕಿರುರಂಗ ಮಂದಿರದಲ್ಲಿ 2ನೇ ಪ್ರದರ್ಶನ, ನಂತರ ಈ ರಂಗಪಯಣವು ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ರಾಜ್ಯಾದ್ಯಂತ 60 ದಿನಗಳು ಸಂಚರಿಸಲಿದೆ ಎಂದು ಶ್ರೀರಂಗಪಟ್ಟಣ ಬಳಿಯ ಕೆ. ಶೆಟ್ಟಿಹಳ್ಳಿಯಲ್ಲಿರುವ ‘ನಿರ್ದಿಗಂತ’ ತೋಟದ ಮನೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಲಾವಿದ ಶ್ರೀಪಾದಭಟ್ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ನಾಟಕ ರೂಪುಗೊಂಡಿದೆ. 15 ಕಲಾವಿದರು ಅಭಿನಯಿಸಿದ್ದು, ಶ್ವೇತಾರಾಣಿ ಹಾಸನ ಸಹ ನಿರ್ದೇಶನ, ಅನುಷ್ ಶೆಟ್ಟಿ, ಮುನ್ನ, ಸುನ್ನುತ ಮೈಸೂರು ಸಂಗೀತ ಸಂಯೋಜಿಸಿದ್ದಾರೆ ಎಂದರು.
ಗಾಯಗಳು ಎಂದರೆ ಯುದ್ಧ, ಗಲಾಟೆ, ಕೋಮುಗಲಭೆ ಸೇರಿದಂತೆ ಹಲವು ಹಿಂಸಾಚಾರದ ನೋವಿನ ಸಂಗತಿಗಳ ಬಗ್ಗೆ ಪ್ರದರ್ಶನ. ಜಗತ್ತು ಇಂದು ಯುದ್ಧೋನ್ಮಾದದಿಂದ ನರಳುತ್ತಿದೆ. ಜಾಗತಿಕ ಯುದ್ಧ, ಕೋಮುಗಲಭೆ, ಮಹಿಳೆಯರ ಮೇಲಿನ ದೌರ್ಜನ್ಯ ಕುರಿತ ಕಥಾಹಂದರ ಹೊಂದಿದ್ದು, ದೇಶದಲ್ಲಿ ಉಂಟಾಗಿರುವ ಕೋಮುಗಲಭೆ ಕುರಿತಾಗಿ ಬಿಂಬಿತವಾಗಿರುವ ನಾಟಕ ಇದಾಗಿದೆ ಎಂದು ಹೇಳಿದರು.
ಮಣಿಪುರದಲ್ಲಿ ಹತ್ಯೆ ಸೇರಿದಂತೆ ಹಲವು ಪ್ರಕರಣಗಳ ಬಗ್ಗೆ ಬೆಳಕು ಚೆಲ್ಲಲಾಗುವುದು. ಹತ್ಯೆಯಿಂದ ನೋವಾಗಿರುವ ಹೆಣ್ಣು ಮಗಳು ನಮ್ಮ ಮನೆಯವಳು ಎಂದುಕೊಳ್ಳಬೇಕು. ನಮ್ಮ ಬೆರಳಿಗೆ ಪೆಟ್ಟಾದರೆ ಮಾತ್ರ ಅದು ನಮಗೆ ಗಾಯ. ಅದೇ ಏಕಲವ್ಯನ ಬೆರಳಿಗಾದರೆ ಅದು ಸಮಾಜಕ್ಕಾದ ಗಾಯ. ಪ್ರಸ್ತುತ ವಿದ್ಯಮಾನದ ವಸ್ತುಸ್ಥಿತಿಯನ್ನು ರಂಗಭೂಮಿಯ ಭಾಷೆಯ ಮೂಲಕ ತಿಳಿಸಲು ಹೊರಟಿದ್ದೇವೆ ಎಂದು ಅವರು ವಿವರಿಸಿದರು.
‘ನಿರ್ದಿಗಂತ’ ಹೊಸ ಕಲಾವಿದರಿಗೆ ಅವಕಾಶ ಕಲ್ಪಿಸುವ ವೇದಿಕೆ ಅಗಿದೆ. ಯುವ ಪ್ರತಿಭೆಗಳಲ್ಲಿ ಇರುವ ಗ್ರಹಿಕೆ, ಆಸಕ್ತಿ, ಉತ್ಸಾಹವನ್ನು ಉಳಿಸುವ ಪ್ರಯತ್ನವೇ ನಡೆದಿದೆ. ಇದರ ಪ್ರಯತ್ನದ ಪ್ರಥಮ ನಾಟಕ ಇದಾಗಿದೆ ಎಂದು ಹೇಳಿದರು.
ಕಲಾವಿದರಾದ ಶ್ರೀಪಾದ ಭಟ್, ಪ್ರೀತಿ ನಾಗರಾಜ್, ಉತ್ಸವ್ ಗೋನವಾರ ಇದ್ದರು.