ನಿರ್ಣಯಕ್ಕೆ ಬದ್ಧರಾಗಿರಲು ಭಕ್ತರ ಒತ್ತಾಯ

18 lxr 1
Published on

ಲಕ್ಷ್ಮೇಶ್ವರ: ಈಗಾಗಲೇ ಕೈಗೊಂಡ ನಿರ್ಣಯಕ್ಕೆ ಮಠಾಧೀಶರು, ಕಮಿಟಿಯವರು ಬದ್ಧರಾಗಿ ದಿಂಗಾಲೇಶ್ವರ ಶ್ರೀಗಳೇ ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿಗಳು ಎಂಬ ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಪಟ್ಟಣದಲ್ಲಿ ಮಂಗಳವಾರ ಸೇರಿದ್ದ ಭಕ್ತರ ಸಭೆಯಲ್ಲಿ ಆಗ್ರಹಿಸಲಾಯಿತು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ನಿರ್ದೇಶಕ ಸೋಮಣ್ಣ ಬೆಟಗೇರಿ ಮಾತನಾಡಿ, ದಿಂಗಾಲೇಶ್ವರ ಶ್ರೀಗಳು ಉತ್ತರಾಧಿಕಾರಿಯಾಗದಂತೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹುನ್ನಾರ ನಡೆಸಿವೆ. ಶ್ರೀಗಳ ಮೇಲೆ ಆಧಾರರಹಿತ ಆರೋಪ ಮಾಡುವುದನ್ನು ಭಕ್ತ ಸಮೂಹ ಒಪ್ಪುವುದಿಲ್ಲ. ಶ್ರೀಗಳು ಉತ್ತರಾಧಿಕಾರಿಯಾದರೆ ಮೂರು ಸಾವಿರ ಶ್ರೀಮಠದಲ್ಲಿ ತ್ರಿವಿಧ ದಾಸೋಹ ನಡೆದು ಗತವೈಭವ ಮೆರೆಯಲಿದೆ ಎಂದರು.

ಜೆಡಿಎಸ್ ಶಿರಹಟ್ಟಿ ತಾಲೂಕಾಧ್ಯಕ್ಷ ಶಂಕರ ಬಾಳಿಕಾಯಿ ಮಾತನಾಡಿ, 2014ರಲ್ಲಿ ಮೂಜಗು ಸೇರಿ ಎಲ್ಲರೂ ಒಪ್ಪಿಕೊಂಡು ಈಗ ವಿರೋಧ ವ್ಯಕ್ತಪಡಿಸುತ್ತಿರುವುದರ ಹಿಂದೆ ಕೆಲ ಶಕ್ತಿಗಳ ಸ್ವಾರ್ಥ ಅಡಗಿದೆ. ಮಠದ ಆಸ್ತಿ ದುರ್ಬಳಕೆ ಮಾಡಿಕೊಳ್ಳಲು ಹೂಡಿರುವ ಕುತಂತ್ರವಾಗಿದೆ. ಫೆ. 23ರಂದು ದಿಂಗಾಲೇಶ್ವರ ಶ್ರೀಗಳು ಕರೆದಿರುವ ಬಹಿರಂಗ ಸಭೆಗೆ ಆಗಮಿಸಿ ಕರ್ತೃ ಗದ್ದುಗೆಯ ಸಾಕ್ಷಿಯಾಗಿ ಪ್ರಮಾಣ ಮಾಡಲಿ ಎಂಬುದು ಭಕ್ತರ ಒತ್ತಾಸೆಯಾಗಿದೆ ಎಂದರು.

ಪುರಸಭೆ ಸದಸ್ಯರಾದ ಮುಸ್ತಾಕಅಹ್ಮದ್ ಶಿರಹಟ್ಟಿ, ವಿಜಯ ಕರಡಿ, ತಾಪಂ ಮಾಜಿ ಸದಸ್ಯ ಚನ್ನಪ್ಪ ಜಗಲಿ, ಜಿಲ್ಲಾ ಕರವೇ ಪ್ರ.ಕಾರ್ಯದರ್ಶಿ ಶರಣು ಗೋಡಿ, ರಾಜು ಅರಳಿ, ಪದ್ಮರಾಜ ಪಾಟೀಲ, ಗಂಗಾಧರ ಮೆಣಸಿನಕಾಯಿ, ಪ್ರಕಾಶ ಮಾದನೂರ ಮಾತನಾಡಿ, ಇಡೀ ತಾಲೂಕಿನ ಜನ ಅವರ ಬೆಂಬಲಕ್ಕಿದೆ. ಫೆ. 23ರಂದು ಗದಗ ಜಿಲ್ಲೆಯಿಂದ ಅಪಾರ ಸಂಖ್ಯೆಯ ಭಕ್ತ ಸಮೂಹದ ನಡೆ ಹುಬ್ಬಳ್ಳಿಯ ಮೂರುಸಾವಿರ ಮಠದ ಕಡೆ ಎಂದರು.

ಜಾಕೀರಹುಸೇನ ಹವಾಲ್ದಾರ, ಬಸಣ್ಣ ಹಂಜಿ, ಮಾಲತೇಶ ಬಸಾಪುರ, ವೆಂಕಟೇಶ ಪಾಟೀಲ, ಪ್ರವೀಣ ಬೋಮಲೆ, ವಿರೂಪಾಕ್ಷ ಆದಿ, ವಿಜಯ ಕುಂಬಾರ, ಬಸವರಾಜ ಚಕ್ರಸಾಲಿ, ಸಂಗಮೇಶ ಬೆಳವಲಕೊಪ್ಪ, ಗಿರೀಶ ಸಜ್ಜನ, ಗಂಗಾಧರ ಕರ್ಜೆಕಣ್ಣವರ, ಈರಣ್ಣ ಅಣ್ಣಿಗೇರಿ, ವಿಜಯ ಆಲೂರ, ಅರುಣ ಪಾಟೀಲ, ಶಿವು ಲಮಾಣಿ, ರಾಜು ಯತ್ತಿನಮನಿ, ಇತರರಿದ್ದರು.

ವಿಮಲರೇಣುಕ ವೀರಮುಕ್ತಿಮುನಿ ಶ್ರೀ ಬೆಂಬಲ

ಲಕ್ಷ್ಮೇಶ್ವರ: ಹುಬ್ಬಳ್ಳಿ ಮೂರು ಸಾವಿರಮಠದ ಉತ್ತರಾಧಿಕಾರಿಯಾಗಲು ದಿಂಗಾಲೇಶ್ವರ ಶ್ರೀಗಳು ಎಲ್ಲ ದೃಷ್ಟಿಯಿಂದಲೂ ಸಮರ್ಥರಾಗಿದ್ದಾರೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಗಳವಾರ ಮುಕ್ತಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಿಂಗಾಲೇಶ್ವರ ಶ್ರೀಗಳ ಸಾಮಾಜಿಕ ಚಿಂತನೆ, ಕಳಕಳಿ ಭಕ್ತ ಸಮೂಹ ಆಕರ್ಷಿಸಿವೆ. ಬಾಲೇಹೊಸೂರಿನಂತಹ ಕುಗ್ರಾಮವನ್ನು ಧಾರ್ವಿುಕ ಕೇಂದ್ರವನ್ನಾಗಿಸಿ ನಾಡಿಗೆ ಪರಿಚಯಿಸಿದ್ದಾರೆ. ಇಂದಿನ ಮೂರು ಸಾವಿರ ಮಠದ ಸಂದಿಗ್ಧ ಸ್ಥಿತಿಯಲ್ಲಿ ಮಠಕ್ಕೆ ಮತ್ತೆ ಜೀವಕಳೆ ತುಂಬಲು ದಿಂಗಾಲೇಶ್ವರ ಶ್ರೀಗಳು ಸಮರ್ಥರಿದ್ದಾರೆ. ಈಗಾಗಲೇ ದಿಂಗಾಲೇಶ್ವರ ಶ್ರೀಗಳ ಉತ್ತರಾಧಿಕಾರತ್ವವನ್ನು ಸಮರ್ಥಿಸಿಕೊಂಡಿರುವ ವಿಜಯ ಸಂಕೇಶ್ವರ ಅವರ ನಡೆಯನ್ನು ಇಡೀ ಭಕ್ತ ಸಂಕುಲವೇ ಸ್ವಾಗತಿಸಿದೆ. ಆದ್ದರಿಂದ 2014ರಲ್ಲಿನ ಒಡಂಬಡಿಕೆಯಂತೆ ಅಂದಿನ ಜಗದ್ಗುರುಗಳು, ಮಠಾಧೀಶರು, ಹಿರಿಯರು, ಕಮಿಟಿಯವರು ಫೆ. 23ರಂದು ಹಾಜರಿದ್ದು ಸತ್ಯವನ್ನು ಮರೆಮಾಚದೇ ದಿಂಗಾಲೇಶ್ವರ ಶ್ರೀಗಳನ್ನು ಉತ್ತರಾಧಿಕಾರಿಗಳೆಂದು ನಾಡಿನ ಜನತೆಗೆ ಸಾರಿ ಹೇಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net