

ಬ್ರಹ್ಮದೇವನಮಡು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ಗತಿಕ ಕುಟುಂಬಕ್ಕೆ ಉಚಿತವಾಗಿ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಡಾ.ವಿರೇಂದ್ರ ಹೆಗಡೆ ಹಾಗೂ ಹೇಮಾವತಿ ಅಮ್ಮನವರ ಆಶಯದಂತೆ ಅಸಹಾಯಕರ ನೆರವಿಗೆ ಯೋಜನೆ ಸದಾ ಕಾಲ ಕಾರ್ಯ ನಿರ್ವಹಿಸುತ್ತದೆ ಎಂದು ಸಿಂದಗಿ ತಾಲೂಕು ಯೋಜನಾಧಿಕಾರಿ ಗಿರೀಶಕುಮಾರ ಹೇಳಿದರು.
ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಗುರುವಾರ ನಿರ್ಗತಿಕ ಲಾನುಭವಿ ನಿಂಗಮ್ಮ ಸಜ್ಜನ ಅವರಿಗೆ ಹೊನ್ನಳ್ಳಿ ಕಾರ್ಯಕ್ಷೇತ್ರದಲ್ಲಿ ಮಂಜೂರಾಗಿರುವ ವಾತ್ಸಲ್ಯ ಮನೆಯ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮ ಹಾಗೂ ಯೋಜನೆಯ ಇನ್ನಿತರ ಕಾರ್ಯಕ್ರಮಗಳಾದ ವಾತ್ಸಲ್ಯ ಕಿಟ್, ಅಸಹಾಯಕರಿಗೆ ಸೇವಿಸಲು ಪೌಷ್ಟಿಕ ಆಹಾರದ ಕಿಟ್ ಮತ್ತು ಅಂಗವಿಕಲರಿಗಾಗಿ ವೀಲ್‌ಚೇರ್, ಸ್ಟಾಂಡ್, ವಾಟರ್ ಬೆಡ್, ಪ್ರತಿ ತಿಂಗಳು ದುಡಿಯಲು ಶಕ್ತಿ ಇಲ್ಲದೆ ಇರುವ ನಿರ್ಗತಿಕರು ಹಾಗೂ ಪೋಷಕರಿಲ್ಲದೆ ಇರುವ ಹಿರಿಯ ಜೀವಿಗಳಿಗೆ ಪ್ರತಿ ತಿಂಗಳು ಮಾಸಾಶನ ನೀಡುವ ಮೂಲಕ ಅವರ ಜೀವನಕ್ಕೆ ಬೆಂಗಾವಲಾಗಿ ಯೋಜನೆ ಕರ್ತವ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಸಿಂದಗಿ ತಾಲೂಕಿನಲ್ಲಿ 5 ವಾತ್ಸಲ್ಯ ಮನೆ ನಿರ್ಮಾಣಕ್ಕೆ ಮುಂದಾಗಿದ್ದು, ಸಕಲ ಸಿದ್ಧತೆಗಳು ನಡೆಯುತ್ತಿವೆ. ಸದಾ ನಿರ್ಗತಿಕರ ಪಾಲಿಗೆ ಧರ್ಮಸ್ಥಳ ಯೋಜನೆ ಒಂದು ಕುಟುಂಬ ಇದ್ದಂತೆ ಎಂದರು.
ಸ್ಥಳೀಯ ವೀರಘಂಟಿ ಮಡಿವಾಳೇಶ್ವರ ಮಠದ ಗುರುಲಿಂಗಯ್ಯ ಗದ್ದಗಿಮಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಬಸವಂತರಾಯ ಭೈರಿ, ಆನಂದ ಗೌಡರ, ರುದ್ರಗೌಡ ಕುಂಟೋಜಿ, ಈರಣ್ಣ ಸಜ್ಜನ, ನಾಗರಾಜ ಸಜ್ಜನ, ಪತ್ರಕರ್ತ ಮಲ್ಲು ಕೆಂಭಾವಿ, ವಲಯದ ಮೇಲ್ವಿಚಾರಕ ಮಂಜುನಾಥ ಸಜ್ಜನ, ಸೇವಾ ಪ್ರತಿನಿಧಿ ಭೀಮಬಾಯಿ ಗೌಂಡಿ, ಅಂಗನವಾಡಿ ಕಾರ್ಯಕರ್ತೆ ರಮಾಜಾನಬಿ ವಸ್ತಾದ, ಸೇವಾದಾರ ಪರಶುರಾಮ ಮಂದೇವಾಲೆ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು ಇದ್ದರು.