

ಸಿರಿಗೇರಿ: ಹೋಬಳಿ ವ್ಯಾಪ್ತಿಯಲ್ಲಿ ಆರು ಆಯುಷ್ಮಾನ್ ಆರೋಗ್ಯ ಮಂದಿರಗಳಿದ್ದು, ಸಿರಿಗೇರಿ, ಮುದ್ದಟನೂರು, ನಿಟ್ಟೂರು, ಎಂ.ಸೂಗೂರು ಕೊಂಚಿಗೇರಿ ಗ್ರಾಮಗಳಲ್ಲಿ ಆರೋಗ್ಯ ಮಂದಿರ ಕಟ್ಟಡ ಸಂಪೂರ್ಣ ಹಾಳಾಗಿವೆ.
ಕೊಂಚಿಗೇರಿಯ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ನಾಲ್ಕು ಕೊಠಡಿಗಳು, ಶೌಚಗೃಹ, ಅಡುಗೆ ಕೋಣೆ ಇದ್ದು, ವಿದ್ಯುತ್ ಸಂಪರ್ಕ ಸಮರ್ಪಕವಾಗಿದ್ದರೂ ಕಟ್ಟಡ ನಿರುಪಯುಕ್ತವಾಗಿವೆ. ಸುಮಾರು 25 ವರ್ಷಗಳ ಹಿಂದೆ ನಿರ್ಮಾಣವಾದ ಈ ಕೇಂದ್ರ ಕೆಲವೇ ಕೆಲವು ದಿನಗಳು ಮಾತ್ರ ಶುಶ್ರೂಷ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದ್ದರು. ಮಧ್ಯರಾತ್ರಿಯಲ್ಲಿ ಕಿಡಿಗೇಡಿಗಳ ಉಪಟಳದಿಂದ ಇಲ್ಲಿ ವಾಸವಾಗದೆ ಬೇರೆ ವಾಸವಾಗಿದ್ದಾರೆ. ಇದರಿಂದಾಗಿ ರಾತ್ರಿ ರೋಗಿಗಳು ಪರದಾಡುವ ಪರಿಸ್ಥಿತಿ ಒದಗಿ ಬಂದೊದಗಿದೆ.
ಗ್ರಾಮೀಣ ಪ್ರದೇಶದಿಂದ ತಾಲೂಕು, ಜಿಲ್ಲಾ ಹಂತದ ಆಸ್ಪತ್ರೆಗೆ ತೆರಳುವ ಮುನ್ನ ಗ್ರಾಮೀಣ ಪ್ರದೇಶದಲ್ಲಿ ರೋಗಿಗಳಿವೆ ಪ್ರಥಮ ಚಿಕಿತ್ಸೆಗೆ ಲಭ್ಯವಾಗಲಿ ಎಂದು ಆಯುಷ್ಮಾನ್ ಆರೋಗ್ಯ ಕೇಂದ್ರ ಮಂದಿರಗಳನ್ನು ಸರ್ಕಾರ ಸ್ಥಾಪಿಸಿವೆ. ಆದರೆ, ಅಧಿಕಾರಿಗಳ ಬೇಜವ್ದಾರಿ ಹಾಗೂ ಸಿಬ್ಬಂದಿ ನಿರಾಸಕ್ತಿಯಿಂದ ಆರೋಗ್ಯ ಮಂದಿರಗಳು ನಿರುಪಯುಕ್ತವಾಗಿವೆ. ಆರೋಗ್ಯ ಮಂದಿರಗಳು ಅನೈತಿಕ ಚಟುವಟಿಕೆಗಳ ತಾಣವಾಗಿ ವಾಸಕ್ಕೆ ಯೋಗ್ಯವಿಲ್ಲದಂತಾಗಿದೆ.
ಕೇಂದ್ರದ ಬಳಿ ಕಿಡಿಗೇಡಿಗಳು ಮಲ-ಮೂತ್ರ ವಿಸರ್ಜನೆ, ಮದ್ಯಸೇವನೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಶುಶ್ರೂಷಕಿಯರು ಇಲ್ಲಿ ವಾಸವಾಗಿರಲು ಭಯಪಡುವಂತಾಗಿದೆ.