ನಿರುಪಯುಕ್ತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ!

18
Published on

ಮಂಜುನಾಥ ಟಿ.ಭೋವಿ ಮೈಸೂರು
ಮೂರು ಅಂತಸ್ತಿನ ಭವ್ಯಕಟ್ಟಡ ಇದೆ. ಆದರೆ, ಅಗತ್ಯ ವೈದ್ಯಕೀಯ ಉಪಕರಣಗಳು, ಸೌಲಭ್ಯ ಮತ್ತು ಸಿಬ್ಬಂದಿಯೇ ಇಲ್ಲ…!

ಇದು 250 ಹಾಸಿಗೆ ಸಾಮರ್ಥ್ಯದ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ದುಸ್ಥಿತಿ. ನಗರದ ಕೆ.ಆರ್.ಎಸ್. ರಸ್ತೆಯ ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿರುವ ಈ ಕಟ್ಟಡ ಉದ್ಘಾಟನೆಗೊಂಡು ಒಂದು ವರ್ಷ ಕಳೆದರೂ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಪರಿಣಾಮ, ಇದ್ದೂ ಇಲ್ಲದಂತಾಗುವ ಮೂಲಕ ನಿರುಪಯುಕ್ತವಾಗಿದೆ.

ಸಾಂಸ್ಕೃತಿಕ ನಗರಿಯ ಹಿರಿಮೆ ಹೊಂದಿರುವ ಮೈಸೂರು, ಮೆಡಿಕಲ್ ಹಬ್ ಆಗಬೇಕು ಎಂಬುದು ಸಾರ್ವಜನಿಕರ ಬಹುದಿನಗಳ ಬೇಡಿಕೆ. ಈ ನಿಟ್ಟಿನಲ್ಲಿ ಖಾಸಗಿ ವಲಯದಿಂದ ಸೂಕ್ತ ಬೆಂಬಲವೂ ದೊರೆಯುತ್ತಿದೆ. ಹೊಸ ಆಸ್ಪತ್ರೆಗಳು, ಹಾಲಿ ಆಸ್ಪತ್ರೆಯ ಉನ್ನತೀಕರಣ ಸೇರಿದಂತೆ ಇನ್ನಿತರ ಪೂರಕ ಚಟುವಟಿಕೆಗಳು ನಡೆಯುತ್ತಿವೆ. ಆದರೆ, ಸರ್ಕಾರಿ ವಲಯದಿಂದ ಇದಕ್ಕೆ ವಿರುದ್ಧ ಪ್ರಕ್ರಿಯೆಗಳು ನಡೆಯುತ್ತಿವೆ. ಇದಕ್ಕೆ ಉತ್ತಮ ನಿದರ್ಶನವೇ ಈ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಅಧೀನದ ಈ ಆಸ್ಪತ್ರೆಯನ್ನು 114.54 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕಟ್ಟಡದ ಕಾಮಗಾರಿ 2020ರ ಡಿಸೆಂಬರ್ 31ಕ್ಕೆ ಪೂರ್ಣಗೊಂಡಿದೆ. ಬಳಿಕ 5 ತಿಂಗಳ ಕಾಲ ಯಾವ ಚಟುವಟಿಕೆಗಳಿಗೂ ಇದು ಬಳಕೆಯಾಗಲಿಲ್ಲ. ಕರೊನಾದಿಂದ ರೋಗಿಗಳ ಸಂಖ್ಯೆ ಹೆಚ್ಚಾಗಿ ಹಾಸಿಗೆ ಕೊರತೆ ಉಂಟಾದಾಗ ಈ ಆಸ್ಪತ್ರೆಯನ್ನು ಬಳಕೆ ಮಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಯಿತು.

ಇದನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡಲು ನಿರ್ಧರಿಸಲಾಯಿತು. ಹೀಗಾಗಿ, ತರಾತುರಿಯಲ್ಲಿ 2021ರ ಮೇ 6ರಂದು ಆಸ್ಪತ್ರೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಉದ್ಘಾಟನೆಗೊಳಿಸಿದರು.
ಆ ಸಂದರ್ಭದಲ್ಲಿ ವಿವಿಧ ಸೌಲಭ್ಯ, ವೈದ್ಯಕೀಯ ಉಪಕರಣಗಳು, ಸಿಬ್ಬಂದಿ ಸೇರಿದಂತೆ ಸಕಲ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದ್ದರು. ಬಳಿಕ ಸಚಿವರು, ಸರ್ಕಾರವೂ ಮರೆತುಬಿಟ್ಟಿತು. ಹೀಗಾಗಿ, ಆಸ್ಪತ್ರೆ ರಾಜ, ಸೈನಿಕ, ಸೇವಕರಿಲ್ಲದ ಅರಮನೆಯಂತಾಗಿದೆ. ಕರೊನಾ ಹಾವಳಿ ಕಡಿಮೆಯಾದ ಬಳಿಕ ಅದಕ್ಕೂ ಉಪಯೋಗವಾಗುತ್ತಿಲ್ಲ. ಹೀಗಾಗಿ, ಖಾಲಿ ಖಾಲಿ ಹೊಡೆಯುತ್ತಿದೆ.

70 ಕೋಟಿ ರೂ. ಬಜೆಟ್:
ಈ ಆಸ್ಪತ್ರೆಗೆ ಬೇಕಾದ ವೈದ್ಯಕೀಯ ಉಪಕರಣಗಳು, ಸೌಲಭ್ಯ ಮತ್ತು ಸಿಬ್ಬಂದಿ ಕಲ್ಪಿಸಲು ಬರೋಬ್ಬರಿ 70 ಕೋಟಿ ರೂ. ಬೇಕಾಗಿದೆ. ಇದರಲ್ಲಿ ಸಿಂಹಪಾಲು ಉಪಕರಣಗಳದ್ದು. ಅದರಲ್ಲಿ ಕ್ಯಾನ್ಸರ್‌ಗೆ ಸಂಬಂಧಿಸಿದ ರೇಡಿಯಂ ಉಪಕರಣವೊಂದಕ್ಕೆ 30 ಕೋಟಿ ರೂ. ವ್ಯಯಿಸಬೇಕಾಗಿದೆ. ದೇಶದಲ್ಲಿ ಎರಡು ಕಂಪನಿಗಳು ಮಾತ್ರ ಈ ಯಂತ್ರವನ್ನು ಉತ್ಪಾದನೆ ಮಾಡುತ್ತವೆ. ಬಾಬಾ ಅಣು ಸಂಶೋಧನಾ ಕೇಂದ್ರದ ಅನುಮತಿಯೂ ಬೇಕಾಗಿದೆ. ಈ ಎಲ್ಲ ಕಾರಣದಿಂದ ದುಬಾರಿಯಾಗಿರುವ ಈ ಯಂತ್ರ ಖರೀದಿಗೆ ಸರ್ಕಾರ ಇನ್ನೂ ಯೋಚನೆ ಮಾಡುತ್ತಿದೆ.

ಪಿಕೆಟಿಬಿ ಆವರಣದಲ್ಲಿರುವ ನಮ್ಮ ಆಸ್ಪತ್ರೆಯ ಪಕ್ಕದಲ್ಲೇ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯೂ ಬರಲಿದೆ. ಅದಕ್ಕೂ ಈ ದುಬಾರಿಯಾಗಿರುವ ರೇಡಿಯಂ ಉಪಕರಣ ಅಗತ್ಯವಿದೆ. ಆದ್ದರಿಂದ ಕಿದ್ವಾಯಿಗೆ ಬಿಟ್ಟು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಉಪಕರಣ ನೀಡುವ ಸಾಧ್ಯತೆ ಇದೆ ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ದಿನೇಶ್ ತಿಳಿಸಿದರು.

ಸಿಬ್ಬಂದಿಯನ್ನೂ ಕೊಡುತ್ತಿಲ್ಲ

ಹಗ್ಗಜಗ್ಗಾಟದಿಂದ ಆಸ್ಪತ್ರೆಗೆ ಅಗತ್ಯ ಸೌಲಭ್ಯ ದೊರೆಯುತ್ತಿಲ್ಲ. ಗ್ರೂಪ್ ಸಿ ಮತ್ತು ಡಿ ಸಿಬ್ಬಂದಿಯನ್ನೂ ಕೊಡುತ್ತಿಲ್ಲ. ಸದ್ಯಕ್ಕೆ ಈ ಸಿಬ್ಬಂದಿಯನ್ನಾದರೂ ಕೊಟ್ಟರೆ ಆಸ್ಪತ್ರೆ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುವುದು. ಅದಕ್ಕೂ ರಾಜ್ಯ ಸರ್ಕಾರ ಕೊಕ್ಕೆ ಹಾಕಿ ಕುಳಿತುಕೊಂಡಿದೆ. ಹೀಗಾಗಿ, ಎಲ್ಲ ಪ್ರಕ್ರಿಯೆಗಳು ಸ್ತಬ್ಧಗೊಂಡಿವೆ. ಕಟ್ಟಡವೂ ಪಾಳು ಬಿದ್ದಿದೆ.

ಕೆ.ಆರ್. ಆಸ್ಪತ್ರೆಗೆ ಪರ್ಯಾಯ
‘ದೊಡ್ಡಾಸ್ಪತ್ರೆ’ ಎಂದೇ ಹೆಸರುವಾಸಿಯಾಗಿರುವ ಕೆ.ಆರ್.ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚಾಗಿದೆ. ಕೆ.ಆರ್.ಆಸ್ಪತ್ರೆ ಮೈಸೂರು ಮಾತ್ರವಲ್ಲದೆ ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಗಳಿಂದ ಬರುವ ಬಡ ರೋಗಿಗಳಿಗೂ ಆಶಾಕಿರಣವಾಗಿದೆ. ಇವರಿಗೆಲ್ಲ ಗುಣಮಟ್ಟದ ವೈದ್ಯಕೀಯ ಸೇವೆ ನೀಡಬೇಕಾಗಿದೆ.

2020ರ ಮೇ ತಿಂಗಳಿನಲ್ಲಿ 3,342 ಹೊಸ ರೋಗಿಗಳು, 6,169 ಹಳೆಯ ರೋಗಿಗಳು, 3,501 ಹೊರರೋಗಿಗಳು ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇದು ತಿಂಗಳ ಲೆಕ್ಕ ಮಾತ್ರ. ವರ್ಷದ ಲೆಕ್ಕ ಇನ್ನಷ್ಟು ಹಿಗ್ಗಲಿದೆ. ಆದ್ದರಿಂದ ಕೆ.ಆರ್.ಆಸ್ಪತ್ರೆ ಮೇಲೆ ಒತ್ತಡ ಕಡಿಮೆ ಮಾಡಿ ಕೆಲ ಘಟಕಗಳು, ಸೌಲಭ್ಯಗಳನ್ನು ಸ್ಥಳಾಂತರಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಆದರೆ, ಈ ಆಶಯ ಸದ್ಯಕ್ಕೆ ಈಡೇರುತ್ತಿಲ್ಲ ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ವೈದ್ಯಕೀಯ ವೆಚ್ಚ ದುಬಾರಿ ಆಗುತ್ತಿದೆ. ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಸುಲಿಗೆ ಮಾಡುತ್ತಿವೆ. ಇದು ಕರೊನಾ ಕಾಲದಲ್ಲಿ ಮಿತಿಮೀರಿತ್ತು. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಿ ಆಧುನಿಕ ವೈದ್ಯಕೀಯ ಸೇವೆ ನೀಡಬೇಕು. ಅದಕ್ಕಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ತ್ವರಿತಗತಿಯಲ್ಲಿ ಆರಂಭಿಸಿ ಬಡರೋಗಿಗಳ ಪಾಲಿಗೆ ಸಂಜೀವಿನಿ ಆಗಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ.

ಆಸ್ಪತ್ರೆಗೆ ಬೇಕಾಗಿರುವ ವೈದ್ಯಕೀಯ ಉಪಕರಣಗಳು, ಸೌಲಭ್ಯ ಕಲ್ಪಿಸಿಕೊಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದೀಗ ಹಣಕಾಸು ಇಲಾಖೆಯ ಬಳಿ ಇದೆ. ಅದಕ್ಕೆ ಅನುಮೋದನೆ ದೊರೆತ ತಕ್ಷಣ ಆಸ್ಪತ್ರೆಯನ್ನು ಶುರು ಮಾಡಲಾಗುವುದು.ಡಾ.ದಿನೇಶ್, ನಿರ್ದೇಶಕರು, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net