

ಗುಂಡ್ಲುಪೇಟೆ: ಪಟ್ಟಣದ ಬಡಾವಣೆಗಳಿಗೆ ಕೊಳಚೆ ಮಿಶ್ರಿತ ನೀರು ಸರಬರಾಜಾಗುತ್ತಿರುವ ಕುರಿತು ನಿವಾಸಿಗಳಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಪುರಸಭೆ ಅಧಿಕಾರಿಗಳು ನಿರುಪಯುಕ್ತ ಸಂಪುಗಳಿಗೆ ನೀರಿನ ಸಂಪರ್ಕ ಕಡಿತಗೊಳಿಸಿದ್ದಾರೆ.
ಹಲವು ದಿನಗಳಿಂದ ಪಟ್ಟಣದ ಕೆ.ಎಸ್.ನಾಗರತ್ನಮ್ಮ ಬಡಾವಣೆಯ ಮನೆಗಳಿಗೆ ಪೂರೈಕೆಯಾಗುತ್ತಿದ್ದ ನೀರಿನಲ್ಲಿ ಹುಳಗಳು ಕಂಡುಬಂದಿದ್ದ ಬಗ್ಗೆ ನಿವಾಸಿಗಳು ಆತಂಕಗೊಂಡಿದ್ದರು. ಕುಡಿಯುವ ನೀರಿನೊಂದಿಗೆ ಚರಂಡಿ ನೀರು ಮಿಶ್ರಣವಾಗುತ್ತಿದೆ ಎಂದು ಜನರು ಪುರಸಭೆಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ ಹಾಗೂ ಸಿಬ್ಬಂದಿ ಬೀದಿ ಬೀದಿಗಳಲ್ಲಿ ಸಂಚರಿಸಿ ಪೈಪ್‌ಲೈನ್ ಪರಿಶೀಲನೆ ನಡೆಸಿದರು. ಈ ವೇಳೆ ಕೆಲವು ಅಪೂರ್ಣಗೊಂಡಿರುವ ಮನೆಗಳು ಹಾಗೂ ಅಡಿಪಾಯ ಹಾಕಿ ನಿರ್ಮಾಣ ಕೈಬಿಟ್ಟ ಕಟ್ಟಡಗಳ ಸಂಪುಗಳಲ್ಲಿ ದೀರ್ಘಕಾಲದಿಂದ ಸಂಗ್ರಹವಾಗಿದ್ದ ನೀರು ಕೊಳೆತು ಪೈಪ್‌ಲೈನ್‌ಗೆ ವಾಪಸ್ ಬರುತ್ತಿರುವುದು ಕಂಡುಬಂದಿದೆ. ಕೂಡಲೇ ಇವುಗಳಿಗೆ ನೀಡಿದ್ದ ನೀರಿನ ಸಂಪರ್ಕ ಕಡಿತ ಮಾಡಿ ಕುಡಿಯುವ ನೀರಿನೊಂದಿಗೆ ಕಲುಷಿತ ನೀರು ಸೇರದಂತೆ ಮಾಡಲಾಯಿತು.
ಪಟ್ಟಣಕ್ಕೆ ನಂಜನಗೂಡಿನ ಕಪಿಲಾ ನದಿಯಿಂದ ಬರುವ ನೀರನ್ನು ಶುದ್ಧೀಕರಣ ಮಾಡಿ ನೇರವಾಗಿ ಪೂರೈಕೆ ಮಾಡಲಾಗುತ್ತಿದ್ದು ಎಲ್ಲಿಯೂ ಟ್ಯಾಂಕುಗಳಲ್ಲಿ ಸಂಗ್ರಹಿಸುತ್ತಿಲ್ಲ. ಆದರೂ ನೀರಿನಲ್ಲಿ ಹುಳಗಳು ಇದ್ದ ಬಗ್ಗೆ ಪರಿಶೀಲಿಸಿದಾಗ ಖಾಲಿ ನಿವೇಶನಗಳಲ್ಲಿ ನಿರ್ಮಿಸಿದ ಸಂಪುಗಳನ್ನು ವರ್ಷಾನುಗಟ್ಟಲೆ ಶುದ್ಧೀಕರಿಸದ ಕಾರಣ ನಿಂತ ನೀರಿನಲ್ಲಿ ಸೊಳ್ಳೆ ಮುಂತಾದ ಹುಳಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಬಳಕೆಯಲ್ಲಿಲ್ಲದ ಸಂಪುಗಳಿಗೆ ನೀರಿನ ಸಂಪರ್ಕ ಕಡಿತಗೊಳಿಸಿ ಮಾಲೀಕರಿಗೆ ನೊಟೀಸ್ ನೀಡಲಾಗಿದೆ ಎಂದು ವಸಂತಕುಮಾರಿ ವಿಜಯವಾಣಿಗೆ ತಿಳಿಸಿದರು.