

ಮಳವಳ್ಳಿ: ನಿರುದ್ಯೋಗಿಗಳೆಂದು ನಿರುತ್ಸಾಹಿಗಳಾಗದೆ ಆತ್ಮವಿಶ್ವಾಸದಿಂದ ತಾಳ್ಮೆಯ ಜೀವನ ರೂಢಿಸಿಕೊಂಡರೆ ಉದ್ಯೋಗಾವಕಾಶಗಳು ಮನೆ ಬಾಗಿಲಿಗೆ ಬರಲಿವೆ ಎಂದು ಶಾಸಕ ಡಾ.ಕೆ.ಅನ್ನದಾನಿ ಕಿವಿಮಾತು ಹೇಳಿದರು.
ಪಟ್ಟಣದ ಶಾಂತಿ ಪದವಿ ಪೂರ್ವ ಕಾಲೇಜಿನಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಬುಧವಾರ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಉದ್ಯೋಗವನ್ನು ಪಡೆದುಕೊಳ್ಳಲು ನಿರುದ್ಯೋಗಿಗಳು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಉದ್ಯೋಗ ವಿನಿಮಯ ಕೇಂದ್ರಕ್ಕೆ ಅಲೆದಾಡುತ್ತಿದ್ದರು. ಆದರೆ ಇಂದು ಖಾಸಗಿ ಕಂಪನಿಗಳು ಉದ್ಯೋಗ ನೀಡಲು ತಾಲೂಕು ಕೇಂದ್ರಕ್ಕೆ ಬಂದು ಆಹ್ವಾನಿಸುತ್ತಿವೆ. ಯುವ ಸಮೂಹ ಅರ್ಹತೆಗೆ ಅನುಗುಣವಾದ ಉದ್ಯೋಗ ಸಿಗುತ್ತಿಲ್ಲ ಎಂಬುದನ್ನು ಬದಿಗಿಟ್ಟು ಸಿಗುವ ಅವಕಾಶಗಳನ್ನು ಬಳಸಿ ಕೊಳ್ಳಬೇಕು. ಜೀವನ ಸುಧಾರಣೆ ಬಳಿಕ ತಮಗೆ ಅನುಕೂಲವಾಗುವಂತಹ ವೇದಿಕೆ ಸೃಷ್ಟಿಸಿಕೊಂಡು ಉನ್ನತ ಸ್ಥಾನಕ್ಕೇರಬೇಕು ಸಲಹೆ ನೀಡಿದರು.
ಉದ್ಯೋಗ ಮೇಳದಲ್ಲಿ 25ಕ್ಕೂ ಹೆಚ್ಚು ವಿವಿಧ ಖಾಸಗಿ ಕಂಪನಿಗಳು ಭಾಗಿಯಾಗಿದ್ದು, 500ಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಪಾಲ್ಗೊಂಡಿದ್ದರು. 60ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ಆದೇಶ ಪ್ರತಿ ನೀಡಲಾಯಿತು.
ಪುರಸಭೆ ಉಪಾಧ್ಯಕ್ಷ ಪ್ರಶಾಂತ್, ಶಾಂತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎಚ್.ಕೆಂಪಯ್ಯ, ಶಾಂತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಪುಟ್ಟರಾಜು, ಜಿಲ್ಲಾ ಉದ್ಯೋಗ ಅಧಿಕಾರಿ ವೇಣುಗೋಪಾಲ್, ಪದವಿ ಕಾಲೇಜು ಪ್ರಾಂಶುಪಾಲ ನಾಗರಾಜು, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಶಿವಪ್ಪ ಸೇರಿದಂತೆ ಇತರರು ಇದ್ದರು.