ನಿರುದ್ಯೋಗದಿಂದ ಮದುವೆಯಾಗದ ಸ್ಥಿತಿ

Published on

ಗುಂಡ್ಲುಪೇಟೆ: ಇತ್ತೀಚಿನ ವರ್ಷಗಳಲ್ಲಿ ವಿದ್ಯಾವಂತರಾದರೂ ಉದ್ಯೋಗ ದೊರೆಯದ ಕಾರಣ ಯುವಕರು ಮದುವೆಯನ್ನೂ ಮಾಡಿಕೊಳ್ಳಲಾಗದ ಸ್ಥಿತಿ ಎದುರಾಗಿದೆ ಎಂದು ಪಡಗೂರು ಅಡವಿ ಮಠಾಧ್ಯಕ್ಷ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಊಟಿ ರಸ್ತೆಯಲ್ಲಿ ದಿ.ಮಹದೇವಪ್ರಸಾದ್ ಫೌಂಡೇಷನ್ ವತಿಯಿಂದ ಗುರುವಾರ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ಜೀವನ ನಿರ್ವಹಣೆಗೆ ಉದ್ಯೋಗ ಅಗತ್ಯವಾಗಿದೆ. ಆದರೆ ಇತ್ತೀಚಿನ ಸ್ಪರ್ಧಾತ್ಮಕ ಪರಿಸ್ಥಿತಿಯಲ್ಲಿ ಉದ್ಯೋಗ ಸಿಗುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗ ಮೇಳ ಆಯೋಜಿಸಿರುವುದು ನಮ್ಮ ತಾಲೂಕಿನ ಯುವಕ, ಯುವತಿಯರಿಗೆ ಸುವರ್ಣ ಅವಕಾಶ ಸಿಕ್ಕಂತಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ್‌ಪ್ರಸಾದ್ ಮಾತನಾಡಿ, ತಾಲೂಕಿನಲ್ಲಿ ಸಾಕಷ್ಟು ನಿರುದ್ಯೋಗ ಸಮಸ್ಯೆ ಇದೆ. ಕೆಲಸ ಕೊಡಿಸುವಂತೆ ಯುವಜನತೆ ಮನವಿ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಫೌಂಡೇಷನ್ ವತಿಯಿಂದ ಮೂರನೇ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದರಲ್ಲಿ ಐಟಿ, ಬಿಟಿ ಸೇರಿದಂತೆ ಸುಮಾರು 80 ಪ್ರತಿಷ್ಠಿತ ಕಂಪನಿಗಳು ಪಾಲ್ಗೊಂಡಿವೆ. ತಾಲೂಕಿನ ಸುಮಾರು 1200 ಯುವಕ, ಯುವತಿಯರು ಮೇಳದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಹರಿಗೆ ಉದ್ಯೋಗಾವಕಾಶ ದೊರೆಯುವಂತೆ ಮಾಡಲಾಗಿದೆ. ಹಲವರಿಗೆ ಸ್ಥಳದಲ್ಲಿಯೇ ಉದ್ಯೋಗ ದೊರೆತಿದೆ ಎಂದು ಹೇಳಿದರು.
ಅಕ್ಷರ ಪೌಂಡೇಷನ್‌ನ ಕುಮಾರ್ ಉಪ್ಪಾರ್, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿ.ಪಂ. ಮಾಜಿ ಸದಸ್ಯರಾದ ಕೆ.ಎಸ್.ಮಹೇಶ್, ಕೆರೆಹಳ್ಳಿ ನವೀನ್, ಚೆನ್ನಪ್ಪ, ಬೊಮ್ಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಬಿ.ರಾಜಶೇಖರ್, ಮುನಿರಾಜು, ದೇಪಾಪುರ ಸಿದ್ದಪ್ಪ, ವಿವಿಧ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net