

ಶಿರಾ: ಬಿಜೆಪಿ ಅವಿಭಕ್ತ ಕುಟುಂಬದಂತೆ ಇದ್ದು, ಕಾರ್ಯಕರ್ತರು ತಾವೇ ಅಭ್ಯರ್ಥಿ ಎನ್ನುವಂತೆ ಪ್ರಚಾರದಲ್ಲಿ ತೊಡಗಿಸಿಕೊಂಡು ನನ್ನ ಗೆಲುವಿಗೆ ಶ್ರಮಿಸಿದ್ದಾರೆ ಎಂದು ಎಂಎಲ್‌ಸಿ ಚಿದಾನಂದ ಎಂ.ಗೌಡ ಹೇಳಿದರು.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳು ಸತತ ಬರಪೀಡಿತ ಪ್ರದೇಶಗಳಾಗಿದ್ದು, ಪದವೀಧರರಿಗೆ ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿಕೊಂಡು ತರಬೇತಿ ಕೊಡುವ ಯೋಜನೆ, ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದರು.
ಶಿಕ್ಷಕರು, ಉಪನ್ಯಾಸಕರು ಮತ್ತಿತರ ಸರ್ಕಾರಿ ನೌಕರರು ಎದುರಿಸುತ್ತಿರುವ ಪದೋನ್ನತಿ, ವರ್ಗಾವಣೆ, ಮೊದಲಾದ ಸಮಸ್ಯೆ, ಕರೊನಾ ಕಾಲದಲ್ಲಿ ಅತಿಥಿ ಉಪನ್ಯಾಸಕರ ಗೌರವಧನ ಕೊಡಿಸುವ ಬಗ್ಗೆಯೂ ಗಮನ ಹರಿಸುವುದು ತಮ್ಮ ಆದ್ಯತೆಯಾಗಿದೆ ಎಂದರು.
ಹೇಮಾವತಿ ನೀರನ್ನು ಮದಲೂರು ಕೆರೆಗೆ ಹರಿಸಲು ಈ ಹಿಂದೆಯೂ ಸಾಧ್ಯವಿತ್ತು. ಆದರೆ ಅದನ್ನು ಜೀವಂತವಾಗಿಟ್ಟು, ಚುನಾವಣೆ ವಸ್ತುವಾಗಿಸಿ, ಜನರಿಗೆ ಟೋಪಿ ಹಾಕುವ ಕೆಲಸ ಈ ಹಿಂದಿನವರು ಮಾಡಿದ್ದಾರೆ, ನೈಸರ್ಗಿಕ ಹಳ್ಳ ಹೊರತುಪಡಿಸಿ, ವೈಜ್ಞಾನಿಕವಾಗಿ ಪೈಪ್ ಲೈನ್ ಮೂಲಕ ನೀರು ಹರಿಸಿದರೆ, ಕೆರೆಗಳು, ಪಿಕಪ್‌ಗಳು ಎಲ್ಲವನ್ನೂ ತುಂಬಿಸಲು ಸಾಧ್ಯವಿದೆ ಎಂದು ಬಿ.ಕೆ.ಮಂಜುನಾಥ್ ತಿಳಿಸಿದರು.
ನಗರಾಧ್ಯಕ್ಷ ವಿಜಯರಾಜ್, ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ, ಮುಖಂಡರಾದ ನಂದೀಶ್, ಶ್ರೀಧರ್, ಲಕ್ಷ್ಮೀನಾರಾಯಣ, ಬಸವರಾಜ್, ಕೋಟೆ ಬಾಬು ಮೊದಲಾದವರು ಇದ್ದರು.