

ಹಾಸನ: ಎರಡು ವರ್ಷಗಳ ಕೋವಿಡ್ ಸಾಂಕ್ರಮಿಕದ ನಂತರ ಈ ಬಾರಿ ಯಾವುದೇ ಕೋವಿಡ್ ನಿಯಮಗಳ ಕಟ್ಟುಪಾಡುಗಳು ಇಲ್ಲದೆ ನಡೆದ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನೋತ್ಸವಕ್ಕೆ ಭಕ್ತರ ಸಂಖ್ಯೆ ಹೆಚ್ಚಿದಂತೆ ಆದಾಯವೂ ದುಪ್ಪಟ್ಟಾಗಿದೆ. ಆದರೆ ಕೋವಿಡ್‌ಗೆ ಮೊದಲು ನಡೆದ ಜಾತ್ರಾ ಮಹೋತ್ಸವದ ಆದಾಯದ ದಾಖಲೆಯನ್ನು ಸರಿಗಟ್ಟಲು ಸಾಧ್ಯವಾಗಿಲ್ಲ.
ಅ.13 ರಿಂದ 27 ರವರೆಗೆ ನಡೆದ ಹಾಸನಾಂಬೆ ದರ್ಶನೋತ್ಸವಕ್ಕೆ ಸುಮಾರು 6 ಲಕ್ಷಕ್ಕೂ ಹೆಚ್ಚಿನ ಭಕ್ತರು ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿ ದೇವಿಯ ದರ್ಶನ ಪಡೆದು ಹೋಗಿದ್ದಾರೆ. ದೇವಾಲಯದ ಹುಂಡಿಗಳ ಎಣಿಕೆ ಕಾರ್ಯ ಶುಕ್ರವಾರ ಬೆಳಗ್ಗೆಯಿಂದ ಶನಿವಾರ ತಡರಾತ್ರಿವರೆಗೆ ನಡೆಯಿತು.
ಹಾಸನಾಂಬೆ ದೇವಿಯ ಹುಂಡಿಯಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಹೊರತುಪಡಿಸಿ, 1,80,17,450 ರೂ. ಸಂಗ್ರಹವಾಗಿತ್ತು. ವಿಶೇಷ ದರ್ಶನದ ಟಿಕೆಟ್‌ಗಳ ಮಾರಾಟದಿಂದ 1,48,27,600 ರೂ. ಸಂಗ್ರಹವಾಗಿದ್ದರೆ, ಪ್ರಸಾದದ ಲಾಡುಗಳ ಮಾರಾಟದಿಂದ 32,82,716 ರೂ. ಸಂಗ್ರಹವಾಗಿದೆ. ಒಟ್ಟು 3,61,27,766 ರೂ. ಆದಾಯ ಬಂದಿದೆ. ಸಿದ್ದೇಶ್ವರಸ್ವಾಮಿ ಹುಂಡಿಯಲ್ಲಿ 8,23,485 ರೂ. ಸಂಗ್ರಹವಾಗಿದೆ. ಹಾಸನಾಂಬೆ ಮತ್ತು ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದಿಂದ ಒಟ್ಟಾರೆ 3,69,51,251 ರೂ. ಆದಾಯ ಬಂದಂತಾಗಿದೆ.
ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕದ ಕಟ್ಟುಪಾಡುಗಳು ನಡುವೆ ನಡೆದ ಜಾತ್ರಾ ಮಹೋತ್ಸದಲ್ಲಿ 1.51 ಕೋಟಿ ರೂ. ಆದಾಯ ಬಂದಿತ್ತು. ಈ ಬಾರಿ ಅದರ ಮೂರು ಪಟ್ಟು ಆದಾಯ ನಿರೀಕ್ಷೆ ಹುಸಿಯಾಗಿದೆ. ಕೋವಿಡ್‌ಗೆ ಮುನ್ನ ನಾಲ್ಕು ವರ್ಷಗಳ ಹಿಂದೆ ನಡೆದ ಹಾಸನಾಂಬಾ ಜಾತ್ರಾ ಮಹೋತ್ಸವದ ಆದಾಯ 4.44 ಕೋಟಿ ರೂ.ಗಳು. ಈ ಬಾರಿ ಆ ದಾಖಲೆ ಮುರಿಯುವ ನಿರೀಕ್ಷೆಯನ್ನು ಜಿಲ್ಲಾಡಳಿತ ಹೊಂದಿತ್ತು. ನಿರೀಕ್ಷೆಯಂತೆ ಭಕ್ತರೂ ಬಂದಿದ್ದರು. ಆದರೆ ಹುಂಡಿಗೆ ನಿರೀಕ್ಷೆ ಪ್ರಮಾಣದಲ್ಲಿ ಹಣ ಬೀಳದಿರುವುದು ಭಕ್ತರು ಸಂಕಷ್ಟದಲ್ಲಿರುವುದನ್ನು ತೋರಿಸುತ್ತದೆ ಎಂಬುದಾಗಿ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಹಾಸನಾಂಬೆ ಮತ್ತು ಸಿದ್ದೇಶ್ವರಸ್ವಾಮಿ ದೇವಾಲಯ ಸಮಿತಿಯ ಖಾತೆಯಲ್ಲಿ ಈಗ 14,88,26,184 ರೂ. ಹಣ ಸಂಗ್ರಹವಾದಂತಾಗಿದೆ. ಈ ವರ್ಷದ ಜಾತ್ರೆಗೆ ಮುನ್ನ ಖಾತೆಯಲ್ಲಿ 11,18,74,933 ರೂ. ಇತ್ತು. ಅದರಲ್ಲಿ ಕೆನರಾಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ರೂಪದಲ್ಲಿ 5,57,02,017 ರೂ., ಗ್ರಾಮೀಣ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ರೂಪದಲ್ಲಿ 1,03,44,601 ರೂ., ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ರೂಪದಲ್ಲಿ 1,03,95,484 ರೂ ಮತ್ತು ಕೆನರಾ ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ 2,83,84,682 ರೂ. ಇದೆ. ಸಿದ್ದೇಶ್ವರಸ್ವಾಮಿ ದೇವರ ಖಾತೆಯಲ್ಲಿ ಐಡಿಬಿಐ ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ 70,48,151 ರೂ. ಇಡಲಾಗಿದೆ.
ಅಭಿವೃದ್ಧಿ ನಿರೀಕ್ಷೆ:
ವರ್ಷಕ್ಕೆ ಹದಿನೈದು ದಿನಗಳು ಮಾತ್ರ ಬಾಗಿಲು ತೆಗೆದರೂ ಕೋಟ್ಯಂತರ ರೂ. ಆದಾಯ ಬರುವ ಹಾಸನಾಂಬೆ ದೇವಸ್ಥಾನ ಮತ್ತು ಸುತ್ತಮುತ್ತಲ ಪ್ರದೇಶವನ್ನು ಅಭಿವೃದ್ಧಿಪಡಿಸಿ ಭಕ್ತರಿಗೆ ಹೆಚ್ಚಿನ ಸೌಲಭ್ಯ ಒದಗಿಸಬಹುದು. ದೇವಸ್ಥಾನದ ಸುತ್ತ ಇರುವ ಭೂಮಿ ಒತ್ತುವರಿ ಆಗಿದ್ದು, ಅದನ್ನು ಬಿಡಿಸಿಕೊಂಡು ವಿವಿಧ ಮೂಲ ಸೌಕರ್ಯಗಳನ್ನು ಕಲ್ಪಿಸಿ ವಿಶಾಲವಾಗಿ ದೇವಾಲಯವನ್ನು ಅಭಿವೃದ್ಧಿಪಡಿಸುವ ಅವಕಾಶ ಇದೆ. ಹಾಸನಾಂಬೆ ದರ್ಶನ ವರ್ಷಕ್ಕೆ ಒಮ್ಮೆ ಮಾತ್ರ ಆದರೂ, ಪಕ್ಕದ ಸಿದ್ದೇಶ್ವರಸ್ವಾಮಿಗೆ ವರ್ಷಪೂರ್ತಿ ಪೂಜೆ ಸಲ್ಲುತ್ತದೆ. ಹಾಗಾಗಿ ಮೂಲಸೌಕರ್ಯ ಅಭಿವೃದ್ಧಿ ಪಡಿಸಿದರೆ ವರ್ಷಪೂರ್ತಿ ಭಕ್ತರನ್ನು ನಿರೀಕ್ಷಿಸಬಹುದಾಗಿದೆ. ಅಲ್ಲದೆ ಧರ್ಮಸ್ಥಳ ಮಾದರಿ ಸರತಿಸಾಲಿಗೆ ಶಾಶ್ವತ ಬ್ಯಾರಿಕೇಡ್ ನಿರ್ಮಿಸಿದರೆ ಪ್ರತಿವರ್ಷದ ಶ್ರಮ ತಪ್ಪುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಪ್ರತ್ಯೇಕ ಸಿಇಒ ನೇಮಕ ಪ್ರಸ್ತಾಪ:
ಜಿಲ್ಲೆಯಲ್ಲಿ ವಿಶೇಷ ಪವಾಡ ಮತ್ತು ಶಕ್ತಿಯ ನಂಬಿಕೆಯ ಕಾರಣಕ್ಕೆ ಹಾಸನಾಂಬೆಯಂತೆಯೇ, ಹಾಸನ ತಾಲೂಕು ಸಾಲಗಾಮೆ ಹೋಬಳಿ ನಿಟ್ಟೂರು ಸಮೀಪ ಇರುವ ಪುರದಮ್ಮ ಮತ್ತು ಚನ್ನರಾಯಪಟ್ಟಣ ತಾಲೂಕು ಬಾಗೂರು ಹೋಬಳಿ ನಾಗರನವಿಲೆ ಕ್ಷೇತ್ರದ ನಾಗೇಶ್ವರಸ್ವಾಮಿ ದೇವಸ್ಥಾನಗಳು ಪ್ರಸಿದ್ಧಿ ಪಡೆದಿವೆ.
ಪುರದಮ್ಮ ದೇವಿಗೆ ಹರಕೆ ನೀಡಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಹರಕೆ ರೂಪದಲ್ಲಿ ಇಲ್ಲಿ ಕುರಿ, ಕೋಳಿ, ಹಂದಿಗಳ ಬಲಿ ಕೊಡಲಾಗುತ್ತದೆ. ಭಾನುವಾರ ಮತ್ತು ಮಂಗಳವಾರ ಇಲ್ಲಿ ಭಕ್ತರ ಸಂಖ್ಯೆ ಹೆಚ್ಚು. ಪುರದಮ್ಮ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಆಡಳಿತಕ್ಕೆ ಒಳಪಡಿಸಿದಾಗಿನಿಂದ ಸಾಕಷ್ಟು ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗಿದೆ. ಆದರೆ ಭಕ್ತರ ಸಂಖ್ಯೆಗೆ ಹೋಲಿಸಿದರೆ ಏನೇನು ಸಾಲದು ಎನ್ನುವಂತಿದೆ.
ಇನ್ನು ನಾಗರನವಿಲೆ ಕ್ಷೇತ್ರವು ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರದ ರೀತಿಯಲ್ಲಿಯೇ ಸರ್ಪದೋಷ ನಿವಾರಣೆಗೆ ಹೆಸರುವಾಸಿ. ನಾಗೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ಹರಕೆ ತಿರಿಸಲು ಈ ಕ್ಷೇತ್ರಕ್ಕೂ ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ಸಹ ಮೂಲಸೌಲಭ್ಯಗಳ ಕೊರತೆ ಇದೆ. ಈ ದೇವಸ್ಥಾನದಿಂದ ಕಾಣಿಕೆ ಮತ್ತಿತರ ರೂಪದಲ್ಲಿ ಮುಜರಾಯಿ ಇಲಾಖೆಗೆ ವಾರ್ಷಿಕ 50 ರಿಂದ 60 ಲಕ್ಷ ರೂ. ಆದಾಯ ಇದೆ.
ಈ ಮೂರು ದೇವಾಲಯಗಳನ್ನು ಸೇರಿಸಿ ಒಂದು ಟ್ರಸ್ಟ್ ಸ್ಥಾಪಿಸಿ ಪ್ರತ್ಯೇಕ ಮುಖ್ಯ ಆಡಳಿತಾಧಿಕಾರಿಯನ್ನು ನೇಮಿಸಿದರೆ, ಮೂರೂ ದೇವಾಲಯಗಳಲ್ಲೂ ಮೂಲಸೌಕರ್ಯ ಅಭಿವೃದ್ಧಿ ಮತ್ತು ನಿರ್ವಹಣೆಗೆ ಅನುಕೂಲವಾಗುತ್ತದೆ ಎಂಬುದಾಗಿ ಈಗ ಮಂಡ್ಯ ಜಿಲ್ಲೆ ಅಪರ ಜಿಲ್ಲಾಧಿಕಾರಿ ಆಗಿರುವ, ಹಿಂದೆ ಹಾಸನ ಉಪ ವಿಭಾಗಾಧಿಕಾರಿ ಆಗಿದ್ದ ಡಾ. ಎಚ್.ಎಲ್. ನಾಗರಾಜ್ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಆಲೋಚನೆಯಲ್ಲಿದ್ದರು. ಅಷ್ಟರಲ್ಲಿ ಚಿಕ್ಕಮಗಳೂರು ವಿಭಾಗಾಧಿಕಾರಿ ಸ್ಥಾನಕ್ಕೆ ವರ್ಗಾವಣೆ ಆದ ಕಾರಣ ಅವರ ಆಲೋಚನೆ ಕಾರ್ಯರೂಪಕ್ಕೆ ಬರಲಿಲ್ಲ.