ನಿರಾಶ್ರಿತರಿಗೆ ಹೊದಿಕೆ ನೀಡುವ ಕಾರ್ಯ ಶ್ಲಾಘನೀಯ: ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ

9
Published on

ಮೈಸೂರು: ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರದಿಂದ ಹಮ್ಮಿಕೊಂಡಿರುವ ನಿರಾಶ್ರೀತರು, ಅಸಹಾಯಕರಿಗೆ ಹೊದಿಕೆ ವಿತರಣಾ ಅಭಿಯಾನದ ಪ್ರಚಾರ ಭಿತ್ತಿಪತ್ರವನ್ನು ಅವಧೂತ ದತ್ತಪೀಠದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಾನುವಾರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಬಳಿಕ ಮಾತನಾಡಿದ ಶ್ರೀಗಳು, ಸಾಂಸ್ಕೃತಿಕ ನಗರಿ ಎಲ್ಲರಿಗೂ ಆಶ್ರಯ ನೀಡಿದೆ. ಕೆಲವರ ಜೀವನದಲ್ಲಿ ವಿಧಿಯಾಟದಿಂದಾಗಿ ತೊಂದೆರೆಯಲ್ಲಿರುತ್ತಾರೆ, ಮಳೆ ಚಳಿ ಎನ್ನದೇ ಬಸ್, ರೈಲ್ವೇ ನಿಲ್ದಾಣ, ದೇವಸ್ಥಾನ, ಫುಟ್‌ಪಾತ್ ಕಟ್ಟಡಗಳ ಮುಂಭಾಗ ರಾತ್ರಿ ಹೊತ್ತು ಆಶ್ರಯ ಪಡೆದಿರುತ್ತಾರೆ. ಸಹಸ್ರಾರು ಸಂಖ್ಯೆಯಲ್ಲಿ ನಿರಾಶ್ರಿತರಿದ್ದು, ಮಾನವೀಯತೆ ದೃಷ್ಟಿಯಿಂದ ಚಳಿ, ಮಳೆಯಿಂದ ಅವರು ರಕ್ಷಣೆ ಪಡೆಯಲು ಅವರಿದ್ದ ಜಾಗಕ್ಕೆ ಹೋಗಿ ಹೊದಿಕೆ ನೀಡುವ ಕೆಎಂಪಿಕೆ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.
ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, ಕೆಲ ವರ್ಷಗಳಿಂದ ಈ ಸಾಮಾಜಿಕ ಕಾರ್ಯ ಮಾಡಿಕೊಂಡು ಬರಲಾಗುತ್ತಿದೆ. ಕಳೆದ ವರ್ಷ 600 ಜನ ರಸ್ತೆ ಬದಿ ಮಲಗಿರುವ ನಿರಾಶ್ರೀತರು, ಅಸಹಾಯಕರಿಗೆ ಹೊದಿಕೆ ನೀಡಲಾಗಿದೆ. ಈ ಬಾರಿಯೂ ಜನವರಿ 15ರ ವರೆಗೆ ಹೊದಿಕೆ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಈ ಬಾರಿ ಸುಮಾರು ಒಂದು ಸಾವಿರ ಹೊದಿಕೆ ವಿತರಣೆ ಮಾಡಬೇಕು ಎನ್ನುವ ಗುರಿ ಇಟ್ಟುಕೊಂಡಿದ್ದು, ಸಾಮಾಜಿಕ ಕಾರ್ಯಕ್ಕೆ ಸೇವಾಸಕ್ತರು ಸಹಕಾರ ನೀಡಬೇಕು. ಇದರಿಂದ ಇನ್ನಷ್ಟು ಜನರಿಗೆ ಅನುಕೂಲವಾಗುತ್ತದೆ ಎಂದು ಅವರು ದಾನಿಗಳಲ್ಲಿ ಮನವಿ ಮಾಡಿದರು.
ಜೀವದಾರರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುಖಂಡರಾದ ಕೇಬಲ್ ಮಹೇಶ್, ಸಾಮಾಜಿಕ ಹೋರಾಟಗಾರರಾದ ಅಜಯ್ ಶಾಸ್ತ್ರಿ, ಅನಿಲ್ ಕುಮಾರ್, ರಾಷ್ಟ್ರೀಯ ಹಿಂದೂ ಸಮಿತಿಯ ಅಧ್ಯಕ್ಷ ವಿಕಾಸ್ ಶಾಸ್ತ್ರಿ, ಮಂಜುನಾಥ್, ತೇಜಸ್ ಕೌಶಿಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net