

ಚಾಮರಾಜನಗರ: ನಗರದ ಎಲ್ಲೆಡೆ ಬಿದ್ದ ಭಾರಿ ಮಳೆಯಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಶೀಘ್ರದಲ್ಲೇ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ನಿಜಧ್ವನಿ ಸೇನಾ ಸಮಿತಿ ವತಿಯಿಂದ ನಗರಸಭೆ ಮುಂದೆ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರಸಭೆ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಲೆಕ್ಕ ಪರಿಶೋಧಕ ವೆಂಕಟನಾಯಕ ಮೂಲಕ ಪ್ರಭಾರ ಪೌರಯುಕ್ತ ನಟರಾಜುಗೆ ಮನವಿ ಸಲ್ಲಿಸಲಾಯಿತು.
ನಗರದಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ನಗರಸಭೆ ವ್ಯಾಪ್ತಿಗೆ ಸೇರಿದ ಅನೇಕ ಮನೆಗಳು ಬಿದ್ದು ಹೋಗಿದೆ. ನಿರಾಶ್ರಿತರು ಪರಿಹಾರ ಪಡೆಯಲು ಅರ್ಜಿ ಹಾಕಿದ್ದಾರೆ. ಆದರೆ ಅಧಿಕಾರಿಗಳು ಪರಿಹಾರ ನೀಡುವಲ್ಲಿ ಸಂಪೂರ್ಣ ವಿಲರಾಗಿದ್ದಾರೆ. ಈ ಕುರಿತು ವಿಚಾರಿಸಲು ನಿರಾಶ್ರಿತರು ಬಂದರೆ ಸಂಬಂಧಪಟ್ಟ ಅಧಿಕಾರಿಗಳು ಉಡಾೆ ಉತ್ತರ ನೀಡುತ್ತಾರೆ. ಮನೆ ಕಳೆದುಕೊಂಡ ನಿರಾಶ್ರಿತರಿಗೆ ಕೂಡಲೇ ಪರಿಹಾರ ನೀಡಬೇಕು ಇಲ್ಲದಿದ್ದರೆ ದೊಡ್ಡಮಟ್ಟದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಮಿತಿ ಆಧ್ಯಕ್ಷ ನಿಜಧ್ವನಿ ಗೋವಿಂದರಾಜ್, ಜನ ಹಿತಾಶಕ್ತಿ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್, ಕನ್ನಡ ಪರ ಹೋರಾಟಗಾರರಾದ ಚಾ.ಸಿ.ಸೋಮನಾಯಕ, ಕದಂಬ ಅಂಬರೀಷ್, ನಮ್ಮನೆ ಪ್ರಶಾಂತ್, ಬಂಗಾರಸ್ವಾಮಿ, ಮರಿಯಾಲದುಂಡಿ ಕುಮಾರ್, ಚಂದ್ರಕುಮಾರ್, ಗೋವಿಂದರಾಜು, ಮಲ್ಲಿಗ ಇತರರು ಇದ್ದರು.