ನಿರಾಕ್ಷೇಪಣಾ ಪತ್ರ ಪಡೆಯಲು ದುಂಬಾಲು

18-klr-8
Published on

ಕೋಲಾರ: ಕಾರ್ಮಿಕರ ದಾಂಧಲೆಯಿಂದ ಸ್ಥಗಿತಗೊಂಡಿದ್ದ ವಿಸ್ಟ್ರಾನ್ ಕಂಪನಿಯ ಪುನರಾರಂಭಕ್ಕೆ ಆಡಳಿತ ಮಂಡಳಿ ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ಕೆಲಸಕ್ಕೆ ನಿಯೋಜನೆಗೊಳ್ಳಲು ಗುತ್ತಿಗೆ ಕಾರ್ಮಿಕರು ನಿರಾಕ್ಷೇಪಣಾ ಪ್ರಮಾಣಪತ್ರಕ್ಕೆ ಪೊಲೀಸ್ ಠಾಣೆಗಳಿಗೆ ಎಡತಾಕುತ್ತಿದ್ದಾರೆ.

ಕಳೆದ ಡಿ.12ರಂದು ಗುತ್ತಿಗೆ ಕಾರ್ಮಿಕರು ವೇತನ ವಿಳಂಬ, ಅವೈಜ್ಞಾನಿಕ ಕೆಲಸದ ಸಮಯ ನಿಗದಿ ಹಾಗೂ ಶೋಷಣೆ ನಡೆಯುತ್ತಿದೆ ಎಂದು ಆಕ್ರೋಶಗೊಂಡು ದಾಂಧಲೆ ನಡೆಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿಪಾಸ್ತಿ ನಷ್ಟ ಉಂಟು ಮಾಡಿದ್ದರು. ಈ ಸಂಬಂಧ ಕಂಪನಿಯವರು 7,000 ಮಂದಿ ಗುತ್ತಿಗೆ ಕಾರ್ಮಿಕರ ವಿರುದ್ಧ ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ದಾಂಧಲೆಗೆ ಸಂಬಂಧಿಸಿದಂತೆ ಕಂಪನಿಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯ ಆಧರಿಸಿ 170ಕ್ಕೂ ಹೆಚ್ಚು ಕಾರ್ಮಿಕರನ್ನು ವೇಮಗಲ್ ಪೊಲೀಸರು ವಶಕ್ಕೆ ಪಡೆದು ಜೈಲಿಗೆ ಅಟ್ಟಿದ್ದರು. ಕಂಪನಿ ಮುಚ್ಚಬಹುದೆಂದು ಕಾರ್ಮಿಕರು ಮತ್ತು ಸಾರ್ವಜನಿಕ ವಲಯದಲ್ಲಿ ಆತಂಕ ಎದುರಾಗಿತ್ತು. ಸರ್ಕಾರ ಮತ್ತು ಕಂಪನಿ ಆಡಳಿತ ಮಂಡಳಿ ನಡುವೆ ಸರಣಿ ಸಭೆ ನಡೆದು ಯಾವುದೇ ಕಾರಣಕ್ಕೂ ಕಂಪನಿ ಮುಚ್ಚದಿರಲು ಸರ್ಕಾರ ಮನವಿ ಮಾಡಿತ್ತಲ್ಲದೆ ಇನ್ನು ಮುಂದೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿ ಕಂಪನಿಯಲ್ಲಿನ ವೈಫಲ್ಯ ಸರಿಪಡಿಸಿಕೊಳ್ಳುವಂತೆ ಸೂಚಿಸಿತ್ತು.

ದಾಂಧಲೆ ಸಂಬಂಧ ಪೊಲೀಸರು ಬಂಧಿಸಿರುವ ಕಾರ್ಮಿಕರಲ್ಲಿ ಬಹುತೇಕರು ನಿರಪರಾಧಿಗಳಾಗಿದ್ದಾರೆ. ಕೂಡಲೇ ಇವರನ್ನು ಬಿಡುಗಡೆ ಮಾಡಬೇಕು, ಸೌಹಾರ್ದ ವಾತಾವರಣ ಸೃಷ್ಟಿಸಿ ಕಂಪನಿ ಪುನರಾರಂಭಗೊಳಿಸಬೇಕು ಎಂದು ಕಾರ್ಮಿಕ ಸಂಘಟನೆಗಳು ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಒತ್ತಾಯಿಸಿದ್ದರು. ಸ್ವತಃ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಕಂಪನಿಗೆ ಭೇಟಿ ನೀಡಿ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಕಂಪನಿ ಶೀಘ್ರ ಪುನರಾರಂಭಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದರು.

ದಾಂಧಲೆ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆಡಳಿತ ಮಂಡಳಿ ಕಂಪನಿಯ ದುರಸ್ತಿಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಂಡಿತ್ತಲ್ಲದೆ ಕಂಪನಿಯ 2300 ಕಾಯಂ ನೌಕರರಿಗೆ ಕೆಲಸದಲ್ಲಿ ಮುಂದುವರಿಯಲು ಸೂಚಿಸಿ ಕಾರ್ಖಾನೆ ಮುಚ್ಚಬಹುದೆಂದು ಆತಂಕಗೊಂಡಿದ್ದ ಜಿಲ್ಲಾಡಳಿತ ನಿಟ್ಟುಸಿರು ಬಿಡುವಂತೆ ಮಾಡಿತು.

ಈ ತಿಂಗಳ ಕೊನೆಯಲ್ಲಿ ಅಥವಾ ೆಬ್ರವರಿ ಮೊದಲವಾರ ಕಂಪನಿ ಚಟುವಟಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಸಿದ್ಧತೆ ಕೈಗೊಂಡಿರುವ ಆಡಳಿತ ಮಂಡಳಿ ಪ್ರಕರಣದಿಂದ ಮುಕ್ತಗೊಂಡಿರುವ ಗುತ್ತಿಗೆ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿರುವುದರಿಂದ ಗುತ್ತಿಗೆ ಕಾರ್ಮಿಕರು ಕಂಪನಿ ನಿಯಮಾನುಸಾರ ನಿರಾಕ್ಷೇಪಣಾ ಪತ್ರ ಪಡೆಯಲು ಮುಂದಾಗಿದ್ದಾರೆ.

ಕಾರ್ಮಿಕರು ನಗರದ ಗ್ರಾಮಾಂತರ ಠಾಣೆಯ ಪಿಎಸ್‌ಐ ಕಿರಣ್ ಬಳಿ ಹಾಜರಾಗಿ ಆಧಾರ್ ಕಾರ್ಡ್, ವೋಟರ್ ಐಡಿ, ವಾಹನ ಚಾಲನಾ ಪರವಾನಗಿ, ಗುತ್ತಿಗೆ ಏಜೆನ್ಸಿಯಿಂದ ಪಡೆದಿರುವ ನೇಮಕಾತಿ ಪತ್ರ ಹಾಗೂ ಮೂರು ಭಾವಚಿತ್ರ ಸಲ್ಲಿಸಿ ನಿರಾಕ್ಷೇಪಣಾ ಪತ್ರ ನೀಡುವಂತೆ ಅರ್ಜಿ ಸಲ್ಲಿಸುತ್ತಿದ್ದಾರೆ.

ಡಿ. 12ರಂದು ನಡೆದ ಘಟನೆಯ ಸಂಪೂರ್ಣ ಮಾಹಿತಿ ಮುಂದಿಟ್ಟುಕೊಂಡು ನಿರಾಕ್ಷೇಪಣಾ ಪತ್ರಕ್ಕೆ ಅರ್ಜಿ ಸಲ್ಲಿಸಿರುವವರ ಪೂರ್ವಾಪರ ವಿಚಾರಿಸಿ ಅರ್ಹರಿಗೆ ಪತ್ರ ನೀಡುವ ಪ್ರಕ್ರಿಯೆ ಭರದಿಂದ ಸಾಗಿದೆ. ಘಟನೆಗೆ ಕಾರಣರಾದ 170 ಕಾರ್ಮಿಕರಿಗೂ ನ್ಯಾಯಾಲಯದಿಂದ ಜಾಮೀನು ಸಿಕ್ಕಿದ್ದು, ಇವರಿಗೂ ಮತ್ತೆ ಕೆಲಸಕ್ಕೆ ಸೇರುವ ಅವಕಾಶ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net