ನಿರಭಿಮಾನ ತೊಲಗಿಸಿ ಸದಭಿಮಾನ ಮೊಳಗಿಸಿ: ಆನೇಕಲ್ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜಿ.ಮುನಿರಾಜು ಕರೆ

03ank news and photos 01(2)
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ಕನ್ನಡ ಭಾಷಾ ಬಳಕೆಯ ಬಗ್ಗೆ ನಿರಭಿಮಾನ ತೊಲಗಿಸಿ, ಸದಭಿಮಾನ ಮೊಳಗಿಸಿ, ಅನ್ಯ ಭಾಷೆಯ ಭ್ರಾಂತಿ ಅಳಿಸಿ, ಮಾತೃ ಭಾಷೆಯ ಮಹಿಮೆ ಮರುಕಳಿಸಲು ಕನ್ನಡಿಗರು ಪಣತೊಡಬೇಕು ಎಂದು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಜಿ.ಮುನಿರಾಜು ಕರೆ ನೀಡಿದರು. ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಆನೇಕಲ್ ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜನರ ಜೀವನ ಪ್ರತಿಬಿಂಬಿಸುವ ರಸಗನ್ನಡಿ ಕನ್ನಡ ಸಾಹಿತ್ಯ, ಇಂತಹ ಸಾಹಿತ್ಯ ಮತ್ತು ಸಂಸ್ಕೃತಿಗಳ ಒಲವಿನ ಬಂಧನದಿಂದ ಜನರ ಬದುಕು ಸಂತಸದಿಂದ ಕೂಡಿದೆ ಎಂದರು.
ನಮ್ಮ ಹಿಂದಣ ಸಂಸ್ಕೃತಿ, ಇಂದಿನ ಸ್ಥಿತಿ, ಮುಂದಣ ಪ್ರಗತಿ ನಿತ್ಯ ವಿನೂತನವಾದವು. ಕನ್ನಡ ಸಾಹಿತ್ಯದ ಪ್ರಗತಿಯ ಪಥದಲ್ಲಿ ಹಿಂದಿನ ಕಾಲದ ಸಾಹಿತ್ಯ ಸಂಸ್ಕೃತಿಗಳನ್ನು ಸಮಂಜಸವಾಗಿ ಅವಲೋಕಿಸಿ ಮುನ್ನಡೆಸಿದಲ್ಲಿ ನಮ್ಮಲ್ಲಿ ಹುದುಗಿರುವ ಕನ್ನಡ ಸಾಹಿತ್ಯದ ಜ್ಞಾನೋದ್ಧೀಪನಕ್ಕೆ ದಾರಿದೀಪ ಆಗಲಿದೆ ಎಂದರು.


ಕನ್ನಡ ಶಾಲೆ ಉಳಿಸೋಣ: ತಾಲೂಕು ವ್ಯಾಪ್ತಿಯಲ್ಲಿ ಅಳಿವಿನಂಚಿನಲ್ಲಿರುವ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಿಗರ ಇಚ್ಛಾಶಕ್ತಿ ಹೋರಾಟಗಳು ಇನ್ನಷ್ಟು ಹೆಚ್ಚಾಗಬೇಕು. ಗಡಿ ಭಾಗದ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡ ಮಾಧ್ಯಮದ ಕಲಿಕಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು. ತಾಲೂಕು ಕೈಗಾರಿಕಾ ಪ್ರದೇಶವಾಗಿದ್ದು ಸ್ಥಳೀಯರಿಗೆ ಮೊದಲ ಆದ್ಯತೆ ಆಗಬೇಕು, ಗ್ರಾಮೀಣ ಜೀವನ ಶೈಲಿಗೆ ಉತ್ತೇಜನ ನೀಡಿ ಕುಲಕಸುಬಿನ ಪರಂಪರೆ ಪ್ರೋತ್ಸಾಹಿಸುವುದೂ ಸೇರಿ ವಿವಿಧ 18 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಇದನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಆಗಬೇಕೆಂದು ಸಮ್ಮೇಳನ ಅಧ್ಯಕ್ಷರು ಮನವಿ ಮಾಡಿದರು. ಆನೇಕಲ್ ಹಿರಿಯ ಸಾಹಿತಿ ಜಗನ್ನಾಥರಾವ್ ಅವರ ‘ನಿತೋತ್ಸವ ಚೇತನ ನಿಸಾರ್ ಸಾರ್ ಪುಸ್ತಕ’, ಹಾಗೂ ಮಧುರ ಚಂದ್ರಶೇಖರ್ ಅವರ ‘ಪುಟಾಣಿ ಮಕ್ಕಳ ನೀತಿ ಕಥೆಗಳು’ ಪುಸ್ತಕವನ್ನು ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು.
ಆನೇಕಲ್‌ನ ಮೊದಲ ಸಾಹಿತಿ ಮುಮ್ಮಡಿ ತಮ್ಮೇಗೌಡರು: ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ್‌ಮೂರ್ತಿ ಮಾತನಾಡಿ, ಆನೇಕಲ್‌ನ ನಾಡ ಪ್ರಭುವಾಗಿ ಮುಮ್ಮಡಿ ತಮ್ಮೇಗೌಡರು ಆನೇಕಲ್‌ನ ಮೊದಲ ಸಾಹಿತಿ ಆಗಿ ಹೊರಹೊಮ್ಮಿ, ಕನ್ನಡ ನಾಡು-ನುಡಿ ಉಳಿಸಿ ಬೆಳೆಸಲು ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ಕನ್ನಡ ನಿತ್ಯೋತ್ಸವ ಆಗಬೇಕಾದರೆ ಕನ್ನಡ ನಿರ್ಲಕ್ಷಿಸುತ್ತಾರೆ ಎಂಬ ಪದವನ್ನೇ ನಾವು ದೂರ ಮಾಡಬೇಕು, ಹೀಗೆ ಮಾಡಬೇಕಾದರೆ ಕನ್ನಡ ರಾಜ್ಯೋತ್ಸವ, ಕನ್ನಡ ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸಬೇಕು ಎಂದರು. ಪುರಸಭೆ ಅಧ್ಯಕ್ಷ ಪದ್ಮನಾಭ್, ಕ್ಷೇತ ್ರಶಿಕ್ಷಣಾಧಿಕಾರಿ ಜಯಲಕ್ಷ್ಮಮ್ಮ, ಹಿರಿಯ ಮುಖಂಡ ವಸಂತರಾಜು, ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತೆ ನಾಗವೇಣಿ, ಹಿರಿಯ ಸಾಹಿತಿ, ಬರಹಗಾರ ಜಗನ್ನಾಥರಾವ್ ಬಹುಳೆ, ಹಿರಿಯ ಮುಖಂಡರಾದ ಯಂಗಾರೆಡ್ಡಿ, ಜಯಣ್ಣ, ಮುಖಂಡರಾದ ಡಿ ವೆಂಕಟೇಶ್, ಪುರುಷೋತ್ತಮ, ತಾಲೂಕು ಆರೋಗ್ಯಾಧಿಕಾರಿ ರವಿ, ಖ್ಯಾತ ವೈದ್ಯ ಡಾ.ಸಿ.ಬಿ. ಮೋಹನ್, ಅತ್ತಿಬೆಲೆ ಪಬ್ಲಿಕ್ ಶಾಲೆ ಮುಖ್ಯಸ್ಥ ಮುನಿರಾಜ್, ಪುರಸಭೆ ಸದಸ್ಯ ರಾಜೇಂದ್ರ ಪ್ರಸಾದ್, ಕಸಾಪ ಗೌರವಕಾರ‌್ಯದರ್ಶಿಗಳಾದ ಗೋವಿಂದ ರಾಜು, ಮಹೇಶ್ ಊಗಿನಳ್ಳಿ, ಅಪ್ಸರ್ ಆಲಿಖಾನ್, ಕರವೇ ಲೋಕೇಶ್‌ಗೌಡ, ಮಲ್ಲಿಕಾರ್ಜುನ್, ತಾಲೂಕು ಅಧ್ಯಕ್ಷ ಮಂಜುನಾಥ, ವ್ಯಾಪರಿನಾರಾಯಣ್, ಗಂಧದನಾಡು ಜನಪರ ವೇದಿಕೆ ವಿಜಯರಾಂ, ಟಿ.ಕೆ.ವಿದಾತ್, ನಿಸರ್ಗ ದೇವರಾಜ್‌ನಾಯಕ್, ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ್, ಸ್ಪೂರ್ತಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಗೋಪಾಲರೆಡ್ಡಿ, ಪವಿತ್ರ, ಯುವ ಮುಖಂಡ ಹಾ.ವೆ. ಅಕ್ಷಯ್, ಡಾ.ವೈಲಾಯ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಅಧ್ಯಕ್ಷ ದನಂಜಯ್ಯ, ಮಾಯಸಂದ್ರ ನಾಗರಾಜು ಮೊದಲಾದವರು ಹಾಜರಿದ್ದರು.


ಬೆಳ್ಳಿ ತೇರಿನಲ್ಲಿ ಅಧ್ಯಕ್ಷರ ಮೆರವಣಿಗೆ: ಕನ್ನಡ ಸಾಹಿತ್ಯ ಸಮ್ಮೇಳನ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಬೆಳಗ್ಗೆ ಎಂಟು ಗಂಟೆಗೆ ಧ್ವಜಾರೋಹಣ ನೆರವೇರಿಸಿ, ಜಾನಪದ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಪಟ್ಟಣದ ವೆಂಕಟೇಶ್ವರ ಚಿತ್ರಮಂದಿರದಿಂದ ಬೆಳ್ಳಿ ತೇರಿನಲ್ಲಿ ಸಮ್ಮೇಳನ ಅಧ್ಯಕ್ಷರು, ತಾಯಿ ಭುವನೇಶ್ವರಿ ದೇವಿ ಮೆರವಣಿಗೆ ನಡೆಯಿತು. ಮೆರವಣಿಗೆ ಸಾಗುವಾಗ ಸಾರ್ವಜನಿಕರು ರಥದ ಮೇಲೆ ಹೂವಿನ ಸುರಿಮಳೆಗೈಯ್ದರು. ವಿವಿಧ ಶಾಲೆ ಮಕ್ಕಳಿಂದ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಲಾತಂಡಗಳಿಂದ ನೃತ್ಯ ಪ್ರದರ್ಶನ, ದೊಮ್ಮಸಂದ್ರದ ಅನಗ ಸರಸ್ವತಿ ತಂಡದ ಕೋಲಾಟ ಗಮನ ಸೆಳೆಯಿತು. ಮೆರವಣಿಗೆಯ ಬಳಿಕ ಪಟ್ಟಣದ ಎಎಸ್‌ಬಿ ಫುಟ್ಬಾಲ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಸಾಹಿತ್ಯ ವೇದಿಕೆಯ ಹೆಬ್ಬಾಗಿಲನ್ನು ಶಾಸಕ ಬಿ.ಶಿವಣ್ಣ ಉದ್ಘಾಟಿಸಿದರು. ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಆನೇಕಲ್ ಕನ್ನಡ ರತ್ನ ಪ್ರಶಸ್ತಿ ಪ್ರದಾನ, ಆನೇಕಲ್ ಕನ್ನಡ ರತ್ನ ವಿದ್ಯಾ ಪ್ರಶಸ್ತಿ ನೀಡಲಾಯಿತು. ಸಂಜೆ ವೇಳೆಗೆ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು.
ಒಟ್ಟಾಗಿ ಕನ್ನಡ ಕಟ್ಟೋಣ: ತಾಲೂಕಿನಲ್ಲಿ ಹಲವು ಸಾಹಿತಿಗಳು, ಬರಹಗಾರರು ಇದ್ದು ಅವರದೇ ಆದ ಕನ್ನಡ ಸೇವೆ ಸಲ್ಲಿಸುತ್ತಿದ್ದಾರೆ. ಅವರೆಲ್ಲರೂ ಸಮ್ಮೇಳನದಲ್ಲಿ ಭಾಗವಹಿಸಿ ಮತ್ತಷ್ಟು ಮೆರುಗು ನೀಡಿದ್ದಾರೆ. ಇದೇ ರೀತಿ ಕನ್ನಡ ಕೆಲಸವನ್ನು ಎಲ್ಲರೂ ಸೇರಿ ಒಟ್ಟಿಗೆ ಮಾಡಬೇಕು ಎಂದು ಶಾಸಕ ಬಿ.ಶಿವಣ್ಣ ಹೇಳಿದರು. ತಾಲೂಕು ಗಡಿ ಭಾಗವಾಗಿದ್ದು, ಇಲ್ಲಿ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹಬ್ಬಗಳು ಹಾಗೂ ಕನ್ನಡಪರ ಕಾರ‌್ಯಕ್ರಮಗಳನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗಿದೆ. ತಾಲೂಕಿನಲ್ಲಿ ಕೈಗಾರಿಕಾ ಪ್ರದೇಶಗಳೇ ಹೆಚ್ಚಾಗಿದ್ದು, ಅನ್ಯ ರಾಜ್ಯದವರು ಕೆಲಸ ಮಾಡಲು ಬಂದಿದ್ದಾರೆ, ಅವರೊಂದಿಗೆ ನಾವು ನಮ್ಮ ಭಾಷೆ, ಸಂಸ್ಕೃತಿಯನ್ನು ಕಲಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.


ಎಲ್ಲರೂ ಸಹಕರಿಸಿ: ಕನ್ನಡದ ಕಂಪು ಪಸರಿಸುವ ಕಾರ‌್ಯಕ್ರಮವೇ ಸಾಹಿತ್ಯ ಸಮ್ಮೇಳನವಾಗಿದೆ. ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಮಾಡಲು ನಿರ್ಧರಿಸಿದಾಗಿನಿಂದ ಹಿರಿಯ ಸಾಹಿತಿಗಳು, ಬರಹಗಾರರು , ಕನ್ನಡಪರ ಹೋರಾಟಗಾರರನ್ನು ಭೇಟಿಯಾಗಿ ಅವರ ಸಲಹೆ, ಮಾರ್ಗದರ್ಶನ ಪಡೆದು ಸಾಹಿತ್ಯ ಸಮ್ಮೇಳನದ ಕಾರ‌್ಯಕ್ರಮಗಳನ್ನು ರೂಪಿಸಿದ್ದೇವೆ. ಎಲ್ಲ ಕನ್ನಡ ಆಸಕ್ತರು ಸಮ್ಮೇಳನದಲ್ಲಿ ಭಾಗವಹಿಸಿ ಮತ್ತಷ್ಟು ಕನ್ನಡದ ಕೆಲಸ ಮಾಡಲು ಸಹಕಾರ ನೀಡಬೇಕು ಎಂದು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಆದೂರು ಪ್ರಕಾಶ್ ಮನವಿ ಮಾಡಿದರು.
ಭಿಕ್ಷೆ ಬೇಡಿ ಕನ್ನಡ ಕಟ್ಟಿದ್ದೇವೆ: ತಾಲೂಕಿನಲ್ಲಿ ಕನ್ನಡ ಕಟ್ಟಬೇಕಾದರೆ ಕಷ್ಟಪಟ್ಟಿದ್ದೇವೆ, ಒಂದು ಸಣ್ಣ ಕಾರ‌್ಯಕ್ರಮ ಮಾಡಬೇಕಾದರೆ ಚಂದಾ ಎತ್ತಿ ಭಾಷಾ ಕೆಲಸ ಮಾಡುತ್ತಿದ್ದೆವು ಎಂದು ಸ್ಮರಿಸಿದ ಹಿರಿಯ ಸಾಹಿತಿ ತಾ.ನಂ ಕುಮಾರಸ್ವಾಮಿ, ಇಂದು ಇಂಗ್ಲಿಷ್ ಬಳಸದಿದ್ದರೆ ಗೌರವ ಇಲ್ಲ ಎಂಬ ಪರಿಸ್ಥಿತಿ ಬಂದೊದಗಿದೆ. ಈ ಭ್ರಮೆಯಿಂದ ಹೊರ ಬರದೇ ಇದ್ದರೆ ಕನ್ನಡ ಕಟ್ಟಲು ಸಾಧ್ಯವಿಲ್ಲ. ತಾಲೂಕು ತಮಿಳುನಾಡಿಗೆ ಹೊಂದಿಕೊಂಡಿದೆ, ಹೊಸೂರಿನಿಂದ ಕೃಷ್ಣಗಿರಿವರೆಗೂ ಕನ್ನಡ ಮಾತನಾಡುತ್ತಾರೆ. ನಾವು ತಾಲೂಕಿನಲ್ಲಿದ್ದುಕೊಂಡು ಕನ್ನಡ ಉಳಿಸಿ ಬೆಳೆಸುವ ಕೆಲಸ ಮಾಡಬೇಕೆಂದು ಅವರು ಹೇಳಿದರು.


ಇಂದಿನ ಕಾರ್ಯಕ್ರಮ: 5ರಂದು ಬೆಳಗ್ಗೆ 9.30 ರಿಂದ 11 ಗಂಟೆವರೆಗೆ ಯುವಕವಿಗೋಷ್ಠಿ, 11ರಿಂದ ಮಧ್ಯಾಹ್ನ 12.30 ರವರೆಗೆ ವಿಚಾರಗೋಷ್ಠಿ, 12.30 ಗಂಟೆಗೆ ಸಂಘಟನಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ, ಮಧ್ಯಾಹ್ನ ಸಮ್ಮೇಳನದ ಅಧ್ಯಕ್ಷರ ಜತೆ ಮಾತು ಮಂಥನ ಕಾರ್ಯಕ್ರಮ, 3ಕ್ಕೆ ಬಹಿರಂಗ ಅಧಿವೇಶನ, ಸಂಜೆ ಸನ್ಮಾನ ಹಾಗೂ ಆನೇಕಲ್ ಕನ್ನಡ ರತ್ನ ಪ್ರಶಸ್ತಿ ಪ್ರದಾನ, ಉತ್ತಮ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net