ನಿರಪರಾಧಿಗಳಿಗೆ ಶಿಕ್ಷೆ ಆಗದಿರಲಿ

DSC_8517
Published on

ಬೀದರ್: ಕೆಲವು ಬಾರಿ ನಕಲಿ ಎನ್ ಕೌಂಟರ್ ನಡೆಯುತ್ತಿವೆ. ಇದರಿಂದ ನಿರಪರಾಧಿಗೆ ಶಿಕ್ಷೆಯಾಗಬಹುದು. ಸುದೀರ್ಘ ವಿಚಾರಣೆ ನಂತರ ತಪ್ಪು ಮಾಡಿದ ಅಪರಾಧಿಗೆ ಶಿಕ್ಷೆಯಾಗಬೇಕೇ ವಿನಃ ಯಾವುದೇ ಒತ್ತಡಕ್ಕೊಳಗಾಗಿ ಒಬ್ಬ ನಿರಪರಾಧಿಗೂ ಶಿಕ್ಷೆ ಆಗಬಾರದೆಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಸಿದ್ರಾಮ ಟಿ.ಪಿ. ಹೇಳಿದರು.

ನಗರದ ಕರ್ನಾಟಕ ಕಾಲೇಜಿನಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಕೆಲವರು ಜನಾಕ್ರೋಶದ ಮೇರೆಗೆ ಕಾನೂನನ್ನು ಕೈಗೆ ತೆಗೆದುಕೊಳ್ಳುವಂತಹ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಅಪರಾಧಿಗಳಿಗೆ ಅಹಿಂಸೆ ಮತ್ತು ಕಾನೂನಿನ ಚೌಕಟ್ಟಿನಲ್ಲಿ ವಿಚಾರಣೆ ನಡೆದ ನಂತರ ಶಿಕ್ಷೆ ಆಗಬೇಕೇ ವಿನಃ ಕಾನೂನು ಕೈಗೆ ತೆಗೆದುಕೊಂಡು ನೇರ ಶಿಕ್ಷೆ ನೀಡುವುದು ಸಲ್ಲದು ಎಂದರು.

ಕರೊನಾದಿಂದ ಬದುಕಿದ್ದವರು ಮತ್ತು ಸತ್ತವರನ್ನು ನಡೆಸಿಕೊಂಡ ರೀತಿ ನೋಡಿದರೆ ಕರುಳು ಕಿತ್ತು ಬರುತ್ತಿದೆ. ಮನುಷ್ಯನ ಶವಕ್ಕೂ ಮಾನವೀಯತೆಯಿಂದ ಸಂಸ್ಕಾರ ನಡೆಸಬೇಕೆಂದು ಕಾನೂನು ತಿಳಿಸುತ್ತದೆ. ಹೀಗಾಗಿ ಸಾರ್ವಜನಿಕರು ಮಾನವೀಯ ಹಕ್ಕು ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಭಾರತೀಯ ಕುಟುಂಬ ಯೋಜನಾ ಸಂಘದ ಕಾರ್ಯದರ್ಶಿ, ಹಿರಿಯ ನ್ಯಾಯವಾದಿ ಅಂಬುಜಾ ವಿಶ್ವಕರ್ಮ ಅವರು, ಸ್ತ್ರೀಯರ ಮೇಲೆ ದೌರ್ಜನ್ಯ, ಅನ್ಯಾಯ, ಅತ್ಯಾಚಾರ, ಕೌಟುಂಬಿಕ ಹಿಂಸೆ, ಸಾಮಾಜಿಕ ಹಿಂಸೆಯಾದಾಗ ಕಾನೂನಿನ ಪ್ರಕಾರ ಯಾವ ರೀತಿ ಹೋರಾಟ ಮಾಡಬೇಕು ಎಂಬುದನ್ನು ವಿವರಿಸಿದರು.

ಕರ್ನಾಟಕ ಕಾಲೇಜಿನ ಅಧ್ಯಕ್ಷ ಡಾ.ಬಸವರಾಜ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘ ಕಾರ್ಯದರ್ಶಿ ಧನರಾಜ ಬಿರಾದಾರ, ಜಂಟಿ ಕಾರ್ಯದರ್ಶಿ ಅಂಬಾದಾಸ ವಾಘರಾಜ, ಪ್ರಾಚಾರ್ಯ ಡಾ. ಜಗನ್ನಾಥ ಹೆಬ್ಬಾಳೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರ್ತಾಪುರೆ, ಪ್ರಮುಖರಾದ ಶಿರೋಮಣಿ, ಗೀತಾಂಜಲಿ, ಶಾಲಿನಿ ಇತರರಿದ್ದರು. ಸಚಿನ್ ವಿಶ್ವಕರ್ಮ ನಿರೂಪಣೆ ಮಾಡಿದರು. ಡಾ. ವೈಜಿನಾಥ ಚಿಕ್ಕಬಸೆ ವಂದಿಸಿದರು. ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಕಾಲೇಜಿನ ಇತಿಹಾಸ ವಿಭಾಗದಿಂದ ಕಾರ್ಯಕ್ರಮ ಸಂಘಟಿಸಲಾಗಿತ್ತು.

12ನೇ ಶತಮಾನದಲ್ಲಿ ಬಸವಾದಿ ಶರಣರು ಸಮಾನತೆ, ಮಾನವೀಯ ಹಕ್ಕುಗಳನ್ನು ಜಾತಿ, ವರ್ಣ, ವರ್ಗರಹಿತವಾಗಿ ಎಲ್ಲರಿಗೂ ಕಲ್ಪಿಸಿದ್ದರು. ಆದರೆ ಇಂದು ಅದರ ಉಲ್ಲಂಘನೆಯಾಗುತ್ತಿರುವುದು ಕಳವಳಕಾರಿ ಸಂಗತಿ.| ಸಿದ್ರಾಮ ಟಿ.ಪಿ., ಸಿವಿಲ್ ನ್ಯಾಯಾಧೀಶ

ಇತ್ತೀಚೆಗೆ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚುತ್ತಿರುವುದು ವಿಪರ್ಯಾಸ. ವಿವಿಧ ಇಲಾಖೆಗಳಲ್ಲಿ ಪರಿವರ್ತನೆ ಪರ್ವ ಆರಂಭ ಆಗಬೇಕು. ಕೆಲೆ ಇಲಾಖೆಯವರು ರಕ್ಷಣೆ ಮಾಡುವವರನ್ನೇ ಅಪರಾಧಿಗಳು ಎನ್ನುವಂತೆ ಬಿಂಬಿಸುವುದು ಸರಿಯಲ್ಲ.| ಡಾ.ಬಸವರಾಜ ಪಾಟೀಲ್ಕರ್ನಾಟಕ ಕಾಲೇಜು ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net