

ಮೈಸೂರು; ಭಾರತವು ಇತ್ತೀಚಿನ ವರ್ಷಗಳಲ್ಲಿ ಉತ್ತಮ ಆಡಳಿತವನ್ನು ಉತ್ತೇಜಿಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ, ಪುದುಚೇರಿಯ ನಿವೃತ್ತ ಲೆಪ್ಟಿನೆಂಟ್ ಗವರ್ನರ್ ಡಾ.ಕಿರಣ್ ಬೇಡಿ ಹೇಳಿದರು.
ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಆನ್‌ಲೈನ್ ಸಂವಾದದಲ್ಲಿ ಮಾತನಾಡಿದರು.
ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಕಾನೂನಿನ ನಿಯಮವನ್ನು ಸುಧಾರಿಸುವ ಗುರಿ ಹೊಂದಲು ಹಲವು ಉಪಕ್ರಮ ಜಾರಿ ಆಗುತ್ತಿವೆ. ಮಹಿಳಾ ಸಬಲೀಕರಣ ಆದ್ಯತೆ ನೀಡಲಾಗುತ್ತಿದೆ. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲು ಮತ್ತು ಲಿಂಗ ಸಮಾನತೆ ಉತ್ತೇಜಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಶಿಕ್ಷಣವು ವ್ಯಕ್ತಿಯ ಜೀವನದ ಅನುಭವ ಸಮೃದ್ಧಗೊಳಿಸುತ್ತದೆ. ‘ಜೀವನದಲ್ಲಿ ಬದಲಾವಣೆಯೇ ನಿರಂತರ’ ಎಂದು ಗ್ರೀಕ್ ತತ್ವಜ್ಞಾನಿ ಹೆರಾಕ್ಲಿಟಸ್ ಪ್ರತಿಪಾದಿಸುತ್ತಾರೆ. ಯುವಕರು ಬದಲಾವಣೆಯ ಸದುಪಯೋಗ ಪಡೆದುಕೊಂಡು ಭವ್ಯ ಭವಿಷ್ಯ ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನನ್ನ ಯಶಸ್ಸಿನ, ಸಾಧನೆ ಹಾದಿಯಲ್ಲಿ ತಮ್ಮ ಕುಟುಂಬವು ಪ್ರಮುಖ ಪಾತ್ರ ವಹಿಸಿದೆ. ಪೂರಕ ವಾತಾವರಣದಲ್ಲಿ ಬೆಳೆದ ನಾನು ನನ್ನ ಆಯ್ಕೆಯ ವೃತ್ತಿಯನ್ನು ಮುಂದುವರಿಸಲು ಕುಟುಂಬದ ಸಂಪೂರ್ಣ ಬೆಂಬಲವಿತ್ತು. ಅದೇ ಶಕ್ತಿಯನ್ನು ಮುಂದಿನ ಪೀಳಿಗೆಯ ಪಾಲಕರು ತಮ್ಮ ಮಕ್ಕಳಿಗೆ ನೀಡಿ ಬೆಂಬಲಿಸಬೇಕು ಎಂದು ಸಲಹೆ ನೀಡಿದರು.
2003ರಲ್ಲಿ ವಿಶ್ವಸಂಸ್ಥೆಯ ಪೊಲೀಸ್ ಸಲಹೆಗಾರರಾಗಿ ಮತ್ತು ಪೊಲೀಸ್ ವಿಭಾಗದ ಮುಖ್ಯಸ್ಥರಾಗಿ ತಮ್ಮ ನಿಯೋಜನೆಯ ಬಗ್ಗೆ ಮಾತನಾಡಿದ ಅವರು, ಪ್ರತಿ ದಿನವೂ ತನ್ನ ಬೆಳವಣಿಗೆಗೆ ಹೇಗೆ ಹೊಸ ಸವಾಲನ್ನು ಒಡ್ಡಿದೆ ಎಂಬುದನ್ನು ಅವರು ನೆನಪಿಸಿಕೊಂಡರು.
ಯುಪಿಎಸ್‌ಸಿ ಆಕಾಂಕ್ಷಿಗಳು ಮೊದಲು 6ರಿಂದ 12ನೇ ತರಗತಿಯವರೆಗೆ ಎನ್‌ಸಿಇಆರ್‌ಟಿ ಪುಸ್ತಕ ಅಧ್ಯಯನ ಮಾಡಬೇಕು. ನಿರಂತರ ಶ್ರಮವೂ ಇದ್ದಾಗ ಮಾತ್ರ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ಮಹಾಜನ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಮುರಳೀಧರ ಭಾಗವತ್, ಗೌರವ ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮೀ ಮುರಳೀಧರ್, ಪ್ರಾಂಶುಪಾಲೆ ಬಿ.ಆರ್.ಜಯಕುಮಾರಿ, ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆರ್.ರಮೇಶ್, ಶೈಕ್ಷಣಿಕ ಸಲಹೆಗಾರ ಡಾ.ಎಚ್.ಶ್ರೀಧರ, ಡಾ.ಎಚ್.ಆರ್.ತಿಮ್ಮೇಗೌಡ, ಡಾ. ಕ್ಯಾಪ್ಟನ್ ಇಂದ್ರಾಣಿ, ಶಮಿಕಾ ಶ್ರೀಹರಿ ಇನ್ನಿತರರಿದ್ದರು.