

ಚಿಕ್ಕಬಳ್ಳಾಪುರ: ನಿರಂತರ ಪರಿಶ್ರಮದ ಮೂಲಕ ಸಾಧನೆಯ ಶಿಖರವನ್ನೇರಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಸ್‌ಜೆಸಿ ತಾಂತ್ರಿಕ ಸಂಸ್ಥೆ ಸಭಾಂಗಣದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆ ಗುರುವಾರ ಹಮ್ಮಿಕೊಂಡಿದ್ದ ಸ್ವಸ್ಥಿ ವಿಜಯ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಪ್ರತಿಯೊಂದು ಕೆಲಸದಲ್ಲೂ ಗೆಲುವು ಸಾಧಿಸುವ ಗುರಿಯೊಂದಿಗೆ ನಿರ್ವಹಿಸಲಾಗುತ್ತಿದೆ. ಇದರಲ್ಲಿ ಪರಿಶ್ರಮದಿಂದ ಯಶಸ್ವಿ ಕಾಣಬಹುದು. ಆದರೆ, ಸತ್ಕಾರ್ಯದ ವಿಜಯವು ಮಾತ್ರ ಸ್ವಸ್ಥಿ ಎನಿಸಿಕೊಳ್ಳುತ್ತದೆ. ಕಳ್ಳನಿಗೆ ಕಳ್ಳತನವೇ ಕಾಯಕ, ಇದರಲ್ಲಿ ಆತ ಗೆದ್ದರೂ ಸಾರ್ಥಕತೆ ಬರುವುದಿಲ್ಲ ಎಂದು ತಿಳಿಸಿದರು.
ಮೊಗ್ಗಾದ ಮಲ್ಲಿಗೆ ಹೂವು ಅರಳಿ ಸುವಾಸನೆ ಸೂಸುವುದರಿಂದ ಎಲ್ಲರನ್ನು ಆಕರ್ಷಿಸುತ್ತದೆ. ಸಕಾರಾತ್ಮಕ ಬದಲಾವಣೆ ಕಾಣದೇ ಇದ್ದಲ್ಲಿ ಯಾವುದೇ ರೀತಿಯ ವಿಶೇಷತೆ ಕಂಡು ಬರುವುದಿಲ್ಲ. ಇದಕ್ಕೆ ಅನುಗುಣವಾಗಿ ಚಿಕ್ಕ ಮಕ್ಕಳು ಉತ್ತಮ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ಬೆಳೆಯಬೇಕು, ಒಳ್ಳೆಯ ಕೆಲಸಗಳಿಂದ ಗೌರವಕ್ಕೆ ಪಾತ್ರರಾಗಬೇಕು ಎಂದರು.
ಬೆಂಗಳೂರು ವಿಶ್ವ ವಿದ್ಯಾಲಯದ ಉಪ ಕುಲಪತಿ ನಿರಂಜನ ಮಾತನಾಡಿ, ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾವಾರು ರಾಜ್ಯದಲ್ಲಿ ಪೂರ್ಣ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಪೈಕಿ ಹೆಚ್ಚಿನ ವಿದ್ಯಾರ್ಥಿಗಳು ಬಿಜಿಎಸ್ ಶಿಕ್ಷಣ ಸಂಸ್ಥೆಗೆ ಸೇರಿರುವುದು ಖುಷಿಯ ವಿಚಾರ. ಇಂತಹ ಸಾಧನೆಗಳು ನಿರಂತರವಾಗಿ ಕಾಣುವಂತಾಗಬೇಕು ಎಂದರು.
ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ವೃತ್ತಿಪರ ಕೌಶಲ, ಮಾನವೀಯ ಮತ್ತು ನೈತಿಕ ಮೌಲ್ಯ, ಸೇವಾ ಮನೋಭಾವ ಬೆಳೆಸಬೇಕು. ಈ ನಿಟ್ಟಿನಲ್ಲಿ ಮಕ್ಕಳ ಪಾಲಕರೂ ಕೈ ಜೋಡಿಸಬೇಕು ಎಂದು ತಿಳಿಸಿದರು.
ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಬೇಕು. ಗುರಿ ಸಾಧನೆಗೆ ಪರಿಪೂರ್ಣ ಶ್ರಮ ಅಗತ್ಯ. ಹಾಗೆಯೇ ನಿರೀಕ್ಷೆಯ ಫಲಿತಾಂಶ ಸಿಗದಿದ್ದಾಗ ಹತಾಶೆಪಡುವ ಅವಶ್ಯಕತೆ ಇಲ್ಲ. ಉದ್ಯೋಗ ಪಡೆಯಲು ಹೆಚ್ಚಿನ ಶೈಕ್ಷಣಿಕ ಅರ್ಹತೆ ಅಗತ್ಯವಿರುತ್ತದೆ. ಉತ್ತಮ ಜೀವನಕ್ಕೆ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳೇ ಮುಖ್ಯವಲ್ಲ. ಗಳಿಕೆಯ ಸ್ವಂತ ಕೌಶಲದಿಂದ ವಿವಿಧ ಕ್ಷೇತ್ರಗಳಲ್ಲಿ ಆತ್ಮವಿಶ್ವಾಸದಲ್ಲಿ ತೊಡಗಿಸಿಕೊಂಡು ಪ್ರಗತಿ ಹೊಂದಬಹುದು ಎಂದರು. ಬಿಜಿಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ಓದಬೇಕಾದ ಸಮಯದಲ್ಲಿನ ಕಾಲಹರಣದ ಪರಿಣಾಮವನ್ನು ಭವಿಷ್ಯದಲ್ಲಿ ಅನುಭವಿಸಬೇಕಾಗುತ್ತದೆ. ಜವಾಬ್ದಾರಿ ಅರಿಯುವಷ್ಟರಲ್ಲಿ ಕಾಲ ಮಿಂಚಿಹೋಗಿರುತ್ತದೆ. ಇದಕ್ಕೆ ಉಜ್ವಲ ಜೀವನಕ್ಕಾಗಿ ನಿರ್ದಿಷ್ಟ ಗುರಿ ಸಾಧನೆಯ ಕಡೆಗೆ ಗಮನಹರಿಸಬೇಕು ಎಂದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಚಿಕ್ಕಮಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಂ.ಜಯರಾಮರೆಡ್ಡಿ, ಪ್ರಾಂಶುಪಾಲ ಜಿ.ಟಿ.ರಾಜು ಮತ್ತಿತರರು ಇದ್ದರು.