ನಿರಂತರ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ

21rajesh3
Published on

ಚಾಮರಾಜನಗರ: ನಿರಂತರವಾಗಿ ಯೋಗಾಭ್ಯಾಸಗಳನ್ನು ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಇನ್ನಿತರೆ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯನ್ನು ಹಸಿರು ಮತ್ತು ಚೆಲುವ ಚಾಮರಾಜನಗರ ಎಂದು ಕರೆಯುವಂತೆ, ಆರೋಗ್ಯಕರವಾದ ಚಾಮರಾಜನಗರ ಎಂದು ಕರೆಯುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ನಿರಂತರ ಯೋಗ ಮತ್ತು ಧ್ಯಾನ ಮಾಡುವುದು ಸಹಕಾರಿಯಾಗಬಹುದು. ಯೋಗ ಮಾಡಲು ಯಾವುದೇ ಹಣ, ಸಾಧನಗಳ ಅವಶ್ಯಕತೆ ಇಲ್ಲ. ಮನೆಯಲ್ಲಿಯೇ ಯೋಗ ಮಾಡಬಹುದಾಗಿದೆ. ಪ್ರತಿಯೊಬ್ಬರೂ ವಿದ್ಯಾರ್ಥಿ ದೆಸೆಯಲ್ಲೇ ಯೋಗವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಸ್ತುತ ಕೆಲಸದ ಒತ್ತಡದ ನಡುವೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಯೋಗ ಮತ್ತು ಧ್ಯಾನ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಪಾಡಿಕೊಳ್ಳಬಹುದಾಗಿದೆ. ಈ ದಿನ ನಮ್ಮ ಮತ್ತು ನಮ್ಮ ಕುಟುಂಬದವರ ಆರೋಗ್ಯವನ್ನು ಕಪಾಡಿಕೊಳ್ಳುವ ನಿಟ್ಟಿನಲ್ಲಿ ಯೋಗ ಮಾಡಲು ಪಣತೊಡಬೇಕಿದೆ ಎಂದರು.

ಬಳಿಕ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಯೋಗಪಟುಗಳು ಯೋಗಾಭ್ಯಾಸ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮೋನಾರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಅಪರ ಜಿಲ್ಲಾಧಿಕಾರಿ ಜವರೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಡಿವೈಎಸ್‌ಪಿ ಲಕ್ಷ್ಮಯ್ಯ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net