

ಲಿಂಗಸುಗೂರು: ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯವಸ್ತವಾಗಿದ್ದು ಭಾನುವಾರ ಕೆಲ ಗ್ರಾಮಗಳಲ್ಲಿ ಮನೆಗಳ ಗೋಡೆ ಕುಸಿದು ಬಿದ್ದಿವೆ.
ಲಿಂಗಸುಗೂರು ಹೋಬಳಿ ನೀರಲಕೇರಿ, ಆನೆಹೊಸೂರು, ಕಾಳಾಪುರ, ಕೆಸರಟ್ಟಿ, ನರಕಲದಿನ್ನಿ, ಕಸಬಾ ಲಿಂಗಸುಗೂರು ಗ್ರಾಮಗಳಲ್ಲಿ 16ಮನೆಗಳಿಗೆ ಹಾನಿಯಾಗಿದ್ದು, ಗುರುಗುಂಟ ಹೋಬಳಿ ಗುರುಗುಂಟ, ಹಟ್ಟಿ, ದೇವರ ಭೂಪೂರ ಗ್ರಾಮಗಳಲ್ಲಿ 15 ಮನೆಗಳಿಗೆ ಹಾನಿಯಾಗಿವೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ. ನೀರಲಕೇರಿ, ಗುಡದನಾಳ, ನರಕಲದಿನ್ನಿ ಗ್ರಾಮಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸಾರ್ವಜನಿಕರು ತೊಂದರೆ ಅನುಭವಿಸಿದರು.
ಲಿಂಗಸುಗೂರು ಪಟ್ಟಣದಲ್ಲಿ ಅಗ್ನಿ ಶಾಮಕ ಠಾಣೆ, ಎಸ್‌ಬಿಎಚ್ ಕಾಲನಿ, ಜನತಾ ಓಣಿಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ಗುಡದನಾಳ ಹಳ್ಳದ ನೀರು ಗ್ರಾಮಕ್ಕೆ ನುಗ್ಗಿದ್ದರಿಂದ ಜನರು ಪರದಾಡುವಂತಾಯಿತು. ಪಟ್ಟಣದಲ್ಲಿ ರಾತ್ರಿಯಿಡಿ ವಿದ್ಯುತ್ ಸಂಚಾರ ಕಡಿತಗೊಂಡಿದ್ದರಿಂದ ಜನರು ತೊಂದರೆ ಅನುಭವಿಸಿದರು. ತಾಲೂಕಿನಾದ್ಯಂತ ಸುರಿದ ಮಳೆಯಿಂದ ಹಾನಿಗೊಳಗಾದ ಮನೆಗಳ ಸಮೀಕ್ಷೆ ಕಾರ್ಯವನ್ನು ಕಂದಾಯ ಇಲಾಖೆ ಅಧಿಕಾರಿಗಳು ನಡೆಸುತ್ತಿದ್ದಾರೆ.