ನಿರಂತರ ಮಳೆಗೆ ಪಾಶಾಪುರ ಅಂಗನವಾಡಿ ಕಟ್ಟಡ ಶಿಥಿಲ

Capture1
Published on

ಔರಾದ್: ಕೌಠಾ(ಬಿ) ಗ್ರಾಪಂ ವ್ಯಾಪ್ತಿಗೆ ಬರುವ ಪಾಶಾಪುರ ಅಂಗನವಾಡಿ ಕಟ್ಟಡ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕುಸಿದು ಬೀಳುವ ಆತಂಕ ಎದುರಾಗಿದೆ. ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಕಾರ್ಯಕರ್ತೆ, ಸಹಾಯಕಿ ಜೀವದ ಭಯದಲ್ಲಿಯೇ ಕಾರ್ಯನಿರ್ವಹಿಸುವಂತಾಗಿದೆ. ಮಕ್ಕಳು ಕೂಡ ಜೀವ ಭಯದಲ್ಲಿಯೇ ಶಾಲಾಪೂರ್ವ ಶಿಕ್ಷಣ ಪಡೆಯಲು ಬರುತ್ತಿದ್ದಾರೆ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಫಲಾನುಭವಿಗಳಿಗೆ ಯೋಜನೆಯ ಒಳಾಂಗಣ ಹಾಗೂ ಹೊರಾಂಗಣ ಚಟುವಟಿಕೆಗಳನ್ನು ಸಮರ್ಪಕವಾಗಿ ನಡೆಸಲು ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ಒಳಗೊಂಡ ಸ್ವಂತ ಕಟ್ಟಡ ಅವಶ್ಯ. ಆದರೆ ಪಾಶಾಪುರ ಕೇಂದ್ರ ಶಿಥಿಲ ಕಾರಣ ಇದಕ್ಕೆ ಅಡ್ಡಿಯಾಗಿದೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಭೇಟಿ ನೀಡಿ ಅಪಾಯ ಸಂಭವಿಸುವ ಮುನ್ನ ಕಟ್ಟಡ ನೆಲಸಮಗೊಳಿಸಬೇಕು. ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡದಲ್ಲಿ ಶಿಕ್ಷಣ ನೀಡಲು ಕ್ರಮ ವಹಿಸಬೇಕು. ಶೀಘ್ರವೇ ಹೊಸ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.

ಪಾಶಾಪುರ ಅಂಗನವಾಡಿ ಕಟ್ಟಡವನ್ನು ಪಿಡಬು್ಲೃಡಿ ಅಧಿಕಾರಿಗಳ ಮುಖಾಂತರ ಪರಿಶೀಲನೆ ಮಾಡಿಸಿ, ನೆಲಸಮಗೊಳಿಸಲು ತಿಳಿಸಲಾಗುವುದು. ಹೊಸ ಕಟ್ಟಡ ನಿಮರ್ಿಸುವ ತನಕ ಮಕ್ಕಳಿಗೆ ಮಂಗಳವಾರದಿಂದಲೇ ಸರ್ಕಾರಿ ಶಾಲೆಯಲ್ಲಿ ಒಂದು ಕೋಣೆಯ ವ್ಯವಸ್ಥೆ ಕಲ್ಪಿಸಿ ಶಿಕ್ಷಣ ನೀಡಲು ವ್ಯವಸ್ಥೆ ಮಾಡಲಾಗುವುದು.
| ಮಹಾಂತೇಶ ಭಜಂತ್ರಿ, ಸಂತಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ

ನಿರಂತರ ಮಳೆಗೆ ಅಂಗನವಾಡಿ ಕೇಂದ್ರದ ಛಾವಣಿಯಿಂದ ಮಳೆ ಹನಿ ಜಿನುಗುತ್ತಿದ್ದು, ಕೋಣೆಯಲ್ಲಿ ನೀರು ನಿಂತು ಹಸಿಯಾಗಿದೆ. ಯಾವಾಗ ಕಟ್ಟಡ ಬೀಳುತ್ತದೆ ಅನ್ನುವ ಆತಂಕ ಎದುರಾಗಿದೆ. ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮಕ್ಕೆ ಮುಂದಾಗಬೇಕು.
| ಶಕುಂತಲಾ ಬೆಂಬುಳಗೆ, ಗ್ರಾಮಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net