ನಿರಂತರ ಮಳೆಗೆ ಕೋಡಿ ಬಿದ್ದ ಹಿರೀಕೆರೆ

05-AUG-GPT-1
Published on

ಗುಂಡ್ಲುಪೇಟೆ: ಕಳೆದ ಎರಡು ತಿಂಗಳಿನಿಂದ ಬಂಡೀಪುರ ಅರಣ್ಯಕ್ಕೆ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಕಾಡಂಚಿನ ಹಿರೀಕೆರೆ ಕೋಡಿಬಿದ್ದಿದ್ದು, ಹೀಗೆ ಮಳೆ ಮುಂದುವರಿದರೆ ಕೆಲವೇ ದಿನಗಳಲ್ಲಿ ತಾಲೂಕಿನ ಇತರ ದೊಡ್ಡ ಕೆರೆಗಳೂ ಕೋಡಿಬೀಳುವ ಹಂತದಲ್ಲಿವೆ.

ಹಂಗಳ ಹೋಬಳಿಯ ಗ್ರಾಮಗಳ ಪ್ರಮುಖ ಜಲಮೂಲವಾದ ಹಿರೀಕೆರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯಕ್ಕೆ ಸೇರಿದ್ದು, ಜಾನುವಾರುಗಳು ಹಾಗೂ ವನ್ಯಜೀವಿಗಳಿಗೆ ಪ್ರಮುಖ ಕುಡಿಯುವ ನೀರಿನ ತಾಣವಾಗಿದೆ. ಇತ್ತೀಚೆಗೆ ಉತ್ತಮ ಮಳೆ ಬೀಳುತ್ತಿರುವುದರಿಂದ ಕಳೆದ ನಾಲ್ಕು ವರ್ಷಗಳಿಂದ ಹಿರೀಕೆರೆ ಕೋಡಿಬೀಳುತ್ತಿದ್ದು, ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗುತ್ತಿದೆ.

ಮೈದುಂಬಿರುವ ಕೆರೆಕಟ್ಟೆಗಳು: ಕಳೆದ ಕೆಲವು ದಿನಗಳಿಂದ ಕುಂದಕೆರೆ, ಓಂಕಾರ್, ಮದ್ದೂರು, ಮೂಲೆಹೊಳೆ ಮುಂತಾದ ಅರಣ್ಯ ಪ್ರದೇಶಗಳಿಗೆ ಉತ್ತಮ ಮಳೆಬೀಳುತ್ತಿದ್ದು, ಗೋಪಾಲಸ್ವಾಮಿ ಬೆಟ್ಟದ ತಪ್ಪಲು, ಮದ್ದೂರು ಅರಣ್ಯ ಹಾಗೂ ಓಂಕಾರ್ ವಲಯಗಳಿಗೆ ಜೋರಾಗಿ ಮಳೆಬಿದ್ದ ಪರಿಣಾಮ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಸೋವವಾರ ತಡ ರಾತ್ರಿ 55 ಮಿ.ಮೀ. ಮಳೆಬಿದ್ದ ಪರಿಣಾಮ ಹಂಗಳದ ಹಿರೀಕೆರೆ ಕೋಡಿಬಿದ್ದ ನೀರು ದೊಡ್ಡಕೆರೆಯತ್ತ ಹರಿಯುತ್ತಿದೆ. ಈಗಾಗಲೇ ತುಂಬಿರುವ ಬೇರಂಬಾಡಿ ಕೆಂಪುಸಾಗರ ಕೆರೆ, ಮಲ್ಲಯ್ಯನಪುರ ಕೆರೆ, ಬರಗಿ ಕೆರೆ, ದೇವಲಾಪುರ ಕೆರೆ, ರಾಘವಾಪುರ ಕೆರೆಗಳು ಕೋಡಿ ಬೀಳುವ ಹಂತದಲ್ಲಿವೆ.

ರಸ್ತೆಯಲ್ಲಿ ನೀರು ನಿಂತು ಪ್ರಯಾಣಿಕರಿಗೆ ತೊಂದರೆ: ಸೋಮವಾರ ತಡರಾತ್ರಿ ಬಿದ್ದ ಮಳೆಯಿಂದ ತಾಲೂಕಿನ ಬೊಮ್ಮಲಾಪುರ ಗ್ರಾಮದಿಂದ ವಡೆಯನಪುರ ರಸ್ತೆಯ ತಗ್ಗು ಪ್ರದೇಶದಲ್ಲಿ ಭಾರಿ ಪ್ರಮಾಣದ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಎರಡು ತಿಂಗಳ ಹಿಂದೆ ಲೋಕೋಪಯೋಗಿ ಇಲಾಖೆ ಜೆಸಿಬಿ ನೆರವಿನಿಂದ ಕಾಲುವೆ ನಿರ್ಮಿಸಿ ಮಳೆ ನೀರು ಹರಿದುಹೋಗುವಂತೆ ಮಾಡಿದ್ದರೂ ನಿರಂತರ ಮಳೆಗೆ ಕಾಲುವೆ ಮುಚ್ಚಿಕೊಂಡ ಪರಿಣಾಮ ಮಳೆ ನೀರು ರಸ್ತೆಯಲ್ಲಿ ಮಡುಗಟ್ಟಿ ನಿಲ್ಲುತ್ತಿದೆ.

ಪ್ರತಿ ಬಾರಿ ಮಳೆಬಿದ್ದಾಗಲೂ ಈ ಹಳ್ಳದಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗುತ್ತಲೇ ಇದ್ದರೂ ಇಲ್ಲಿ ಸೇತುವೆ ನಿರ್ಮಾಣ ಮಾಡಲು ಮುಂದಾಗಿಲ್ಲ. ಜತೆಗೆ ಗ್ರಾಮದ ಚರಂಡಿಗಳ ನೀರು ಸಹ ಇಲ್ಲಿಗೆ ಸೇರುತ್ತಿದ್ದು, ಈ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರಿಗೆ ಕೊಳಚೆ ನೀರಿನ ಸ್ನಾನವಾಗುತ್ತಿದ್ದು, ತುಂಬ ತೊಂದರೆ ಅನುಭವಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net