

ಹುಬ್ಬಳ್ಳಿ: ಕಳೆದ ವರ್ಷದ ಅತಿವೃಷ್ಟಿ ಹಾಗೂ ನೆರೆಯಿಂದಾಗಿ ಹಾಳಾದ ಬೆಳೆಯ ಕಹಿ ನೆನಪು ಮಾಸುವ ಮುನ್ನವೇ ಈ ಬಾರಿಯ ವರ್ಷಧಾರೆಯೂ ರೈತರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
ಈ ವರ್ಷ ಉತ್ತಮ ಮುಂಗಾರಿನ ಮುನ್ಸೂಚನೆ ಸಿಕ್ಕಿದ್ದರಿಂದ ರೈತರು ಎಲ್ಲ ಕಹಿ ಮರೆತು ಬಿತ್ತನೆ ಮಾಡಿದ್ದಾರೆ. ಇನ್ನೇನು ಬೆಳೆ ಕೈಗೆ ಬರುವ ಹೊತ್ತಿಗೆ ಶುರುವಾಗಿರುವ ಜಡಿ ಮಳೆ ರೈತ ಸಮುದಾಯವನ್ನು ಕಂಗಾಲಾಗಿಸಿದೆ. ಧಾರವಾಡ ಜಿಲ್ಲೆಯಲ್ಲಿರುವ 2.34 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶದ ಪೈಕಿ ಈ ಬಾರಿ ಶೇ. 95ರಷ್ಟು ಮುಂಗಾರು ಬಿತ್ತನೆಯಾಗಿದೆ. ಈ ಸಲ ಬಿತ್ತನೆ ಉತ್ತಮವಾಗಿತ್ತು, ಒಳ್ಳೆಯ ಬೆಳೆ ಬರುವ ನಿರೀಕ್ಷೆಯೂ ಇದೆ. ಆದರೆ, ಇದೀಗ ಮಳೆ ನಿರಂತರವಾಗಿ ಹಿಡಿದಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿ ನಿರ್ವಣವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು, ಶೇಂಗಾ, ಸೋಯಾಬಿನ್, ಹತ್ತಿ, ಗೋವಿನಜೋಳ, ಉದ್ದು, ಜೋಳ ಇತ್ಯಾದಿಗಳನ್ನು ಬಿತ್ತನೆ ಮಾಡಲಾಗಿದೆ.
ಕಟಾವಿಗೆ ಬಂದಿತ್ತು: ಹುಬ್ಬಳ್ಳಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಹೆಸರು ಬೆಳೆ ಕಟಾವಿಗೆ ಬಂದಿತ್ತು. ಇದು ಎರಡೂವರೇ ತಿಂಗಳ ಬೆಳೆಯಾಗಿದ್ದರಿಂದ ಜೂನ್ ಮೊದಲ ವಾರ ಉತ್ತಮ ಹಂಗಾಮು ಇದ್ದಿದ್ದರಿಂದ ರೈತರು ಖುಷಿಯಿಂದ ಬಿತ್ತನೆ ಮಾಡಿದ್ದರು. ಸಾಮಾನ್ಯವಾಗಿ ಆಗಸ್ಟ್ ಮೊದಲ- ಎರಡನೇ ವಾರದಲ್ಲಿ ಹೆಸರು ಕಟಾವಿಗೆ ಬರುತ್ತದೆ. ಇದೀಗ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಹೆಸರು ಕಾಳು ಉಬ್ಬಿ ನಿಂತಿವೆ. ಕೆಲವೆಡೆ ಹಳದಿ ರೋಗ ಬಂದು ಒಂದಿಷ್ಟು ಬೆಳೆ ಹಾಳಾಗಿದ್ದರೆ ಈಗ ಮಳೆ ಫಸಲನ್ನು ಆಪೋಷಣ ತೆಗೆದುಕೊಳ್ಳುತ್ತಿದೆ ಎಂದು ಶಿರಗುಪ್ಪಿ ಹೋಬಳಿ ವ್ಯಾಪ್ತಿಯ ರೈತರು ಅಲವತ್ತುಕೊಳ್ಳುತ್ತಿದ್ದಾರೆ.
ಹೆಸರು ಕಟಾವಿಗೆ ಬಂದಿದೆ. ಸದ್ಯ ಮಳೆ ಸರಿದು ಬಿಸಿಲು ಬಿದ್ದರೆ ಮಾತ್ರ ಒಂದಿಷ್ಟು ಬೆಳೆ ಕೈಗೆ ಸಿಗುತ್ತದೆ. ಇಲ್ಲದಿದ್ದರೆ ಸಂಪೂರ್ಣ ಹಾಳಾಗಿ ಹೋಗಲಿದೆ. ಈಗಾಗಲೇ ಗಿಡದಲ್ಲೇ ಕಾಳು ಉಬ್ಬಿದ್ದು, ಅಲ್ಲಿಯೇ ಮೊಳಕೆ ಒಡೆಯುವ ಸಾಧ್ಯತೆಯೂ ಇದೆ ಎಂದು ಅಮರಗೋಳದ ರೈತ ಪರ್ವತಗೌಡ ಪಾಟೀಲ ನೋವು ತೋಡಿಕೊಂಡರು.
ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲಿ ಎರಡು ದಿನದಲ್ಲಿ ಮಳೆಯಿಂದಾಗಿ 9ಕ್ಕೂ ಹೆಚ್ಚು ಮನೆಗಳಿಗೆ ಧಕ್ಕೆಯಾಗಿದೆ. ಹೊಲದಲ್ಲಿನ ಬೆಳೆಗಳಿಗೂ ಹಾನಿಯಾಗಿದ್ದರ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು. | ಪ್ರಕಾಶ ನಾಶಿ, ತಹಸೀಲ್ದಾರ್ ಹುಬ್ಬಳ್ಳಿ