

ಮೈಸೂರು: ನಿರಂತರವಾದ ಪ್ರಯತ್ನ ಮತ್ತು ಪರಿಪೂರ್ಣ ಸಿದ್ಧತೆಗಳಿಂದ ಮಾತ್ರ ಜೀವನದಲ್ಲಿ ಯಶಸ್ಸು ಕಾಣುವುದಕ್ಕೆ ಸಾಧ್ಯ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಿ.ಎಸ್.ರಮೇಶ್ ಹೇಳಿದರು.
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಕೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಸತತ ಪರಿಶ್ರಮ ಮತ್ತು ಪೂರ್ವಸಿದ್ಧತೆಗಳೊಂದಿಗೆ ಜೀವನದಲ್ಲಿ ಅತ್ಯಮೂಲ್ಯವಾದ ಸಾಧನೆಯನ್ನು ಸಾಧಿಸಬೇಕು ಎಂದರು.
ಪಠ್ಯವಲ್ಲದೆ, ಪಠ್ಯೇತರ ಚಟುವಟಿಕೆ ಸಹ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಅವಶ್ಯಕ. ಚಿಕ್ಕ ವಯಸ್ಸಿನಲ್ಲೇ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರ ಮೂಲಕ ಸದೃಢತೆ ಪಡೆದರೆ ಮುಂದಿನ ದಿನಗಳಲ್ಲಿ ಫಲಪ್ರದ ಯಶಸ್ಸನ್ನು ಪಡೆಯಲು ಸಾಧ್ಯ. ಎಂತಹ ಕಷ್ಟಗಳೇ ಎದುರಾದರೂ ಪ್ರಯತ್ನ ಬಿಡಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಕೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತವೆ. ಸಾಂಸ್ಕೃತಿಕ ಚಟುವಟಕೆ ಬೌದ್ಧಿಕ ಶಕ್ತಿ ವೃದ್ಧಿಸಿದರೆ ಕ್ರೀಡಾ ಚಟುವಟಕೆ ದೈಹಿಕ ಶಕ್ತಿ ಹೆಚ್ಚಿಸಿ ವಿದ್ಯಾರ್ಥಿಗಳು ಸಾಧನೆ ಮಾಡಲು ಅನುವು ಮಾಡಿಕೊಡುತ್ತವೆ ಎಂದು ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಕ್ರೀಡಾ ಸಮಿತಿಯ ಸಂಚಾಲಕ ಕೆ.ಎಂ ಕಾಂತರಾಜು ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳಲ್ಲಿ ಚಂಚಲ ಸ್ವಭಾವವಿದ್ದು, ಕೆಲವು ವೇಳೆ ಅನಿರೀಕ್ಷಿತ ಅವಘಡಗಳು ನಡೆಯುತ್ತವೆ. ಈ ಅವಘಡ ತಪ್ಪಿಸುವ ಸಲುವಾಗಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಆರ್.ಮೂಗೇಶಪ್ಪ ಮಾತನಾಡಿ, ವಿದ್ಯಾರ್ಥಿಗಳು ತೆಗೆದುಕೊಳ್ಳುವ ದೃಢ ನಿರ್ಧಾರ ಅವರ ಮುಂದಿನ ಜೀವನ ರೂಪಿಸುತ್ತದೆ. ಅನಾಯಾಸವಾಗಿ ಯಾವುದೇ ಸಾಧನೆ ಸಾಧಿಸಲು ಸಾಧ್ಯವಿಲ್ಲ. ಪರಿಶ್ರಮವಿದ್ದಾಗ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ ಎಂದು ಹೇಳಿದರು.
ಪ್ರಾಂಶುಪಾಲ ಎಸ್.ಸೋಮಶೇಖರ್, ಕನ್ನಡ ಉಪನ್ಯಾಸಕ ಎಸ್. ನಂಜುಂಡಸ್ವಾಮಿ, ಭೂಗೋಳಶಾಸ್ತ್ರ ಉಪನ್ಯಾಸಕ ಎಂ. ಶಿವಕುಮಾರ್ ಇದ್ದರು.