

ಮೈಸೂರು: ನಿರಂತರ ಪರಿಶ್ರಮ, ಶಿಸ್ತು, ವಿದ್ಯಾರ್ಥಿಗಳು ಗುರಿ ಮುಟ್ಟಲು ಸಹಕಾರಿ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ. ಸವಿತಾ ಹೇಳಿದರು.
ಜ್ಞಾನಬುತ್ತಿ ಸಂಸ್ಥೆಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಐಎಎಸ್, ಕೆಎಎಸ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ 50 ದಿನದ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
20 ವರ್ಷಗಳ ಹಿಂದೆ ನಾನು ಕೂಡ ನಿಮ್ಮ ಹಾಗೆ ಜ್ಞಾನಬುತ್ತಿ ಸಂಸ್ಥೆಗೆ ಕೆಎಎಸ್ ತರಬೇತಿಗೆ ಬಂದಿದ್ದೆ. ವಿವಿಧ ತಾಲೂಕುಗಳಲ್ಲಿ ತಹಸೀಲ್ದಾರ್, ವಿಭಾಗಾಧಿಕಾರಿ, ಮುಡಾ ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿಯಾಗಿ ಪ್ರಸ್ತುತ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆಯಾಗಿ ನಿಮ್ಮ ಮುಂದೆ ನಿಂತು ಮಾತನಾಡುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು.
ಕಳೆದ ನಾಲ್ಕು ದಶಕಗಳಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಜ್ಞಾನಬುತ್ತಿ ಸಂಸ್ಥೆ ಮಾದರಿಯಾದದ್ದು ಎಂದು ಶ್ಲಾಘಿಸಿದರು. ನಾನು ಕೂಡ ಹಳ್ಳಿಯಿಂದ ಬಂದ ಹುಡುಗಿ, ಮೈಸೂರಿನ ಬಿಸಿಎಂ ಹಾಸ್ಟೆಲ್‌ನಲ್ಲಿದ್ದು ಓದಿದೆ.
ಸ್ನೇಹಿತರ ಸಂಘ-ಸಹವಾಸ ಚೆನ್ನಾಗಿರಬೇಕು. ಮೈಸೂರಿನಂತಹ ಆಕರ್ಷಕ ನಗರದಲ್ಲಿದ್ದರೂ ನಾವು ಅನಗತ್ಯವಾಗಿ ಸುತ್ತಾಡಿ ತಿರುಗದೆ ಪಟ್ಟಾಗಿ ಕೂತು ಅಧ್ಯಯನ ಮಾಡಿದೆವು. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗಾಗಿ ಹತ್ತು ಜನ ಸ್ನೇಹಿತರು ಗುಂಪುಗೂಡಿ ಚರ್ಚಿಸುತ್ತಿದ್ದೆವು. ಈಗ ಅವರೆಲ್ಲರೂ ವಿವಿಧ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕಿಂತ ಹೆಮ್ಮೆ ಮತ್ತು ಸಂತೋಷ ಎಲ್ಲಿದೆ ಹೇಳಿ ಎಂದರು.
2025ರಲ್ಲಿ ಐಎಎಸ್ ಆಯ್ಕೆಯಾಗಿರುವ ಸಾಲಿಗ್ರಾಮ ತಾಲೂಕಿನ ಅಂಕನಹಳ್ಳಿ ಗ್ರಾಮದ ಎ.ಸಿ.ಪ್ರೀತಿ ಮಾತನಾಡಿ, ಹಣೆಬರಹ ಮತ್ತು ಋಣದ ಮಾತು ಬದಿಗಿಟ್ಟು ಪರಿಶ್ರಮ ಹಾಕಿ. ಅದು ನನ್ನ ಹಣೆಯಲ್ಲಿ ಬರೆದಿಲ್ಲ ಅಥವಾ ನನಗೆ ಆ ಹುದ್ದೆ ಪಡೆಯಲು ಋಣವಿಲ್ಲ ಎಂಬ ನಕಾರಾತ್ಮಕ ಮಾತನ್ನು ಬದಿಗಿಟ್ಟು ನಿರಂತರ ಅಭ್ಯಾಸ ಮತ್ತು ಪರಿಶ್ರಮದ ಮೇಲೆ ನಂಬಿಕೆ ಇಟ್ಟರೆ ದೊಡ್ಡ ಹುದ್ದೆ ಪಡೆಯಬಹುದು ಎಂದರು.
ನಾನು ಹಳ್ಳಿಯ ಹುಡುಗಿ, ರೈತನ ಮಗಳು, ಬಡತನದ ಸಮಸ್ಯೆಗಳು, ಸರ್ಕಾರಿ ಶಾಲಾ-ಕಾಲೇಜಿನಲ್ಲಿ ಓದು, ಕನ್ನಡ ಮಾಧ್ಯಮ ಬೇರೆ, ಇಂಗ್ಲಿಷ್ ಅಷ್ಟಕಷ್ಟೆ. ಇಷ್ಟೆಲ್ಲ ಸಮಸ್ಯೆಗಳ ನಡುವೆ ಐಎಎಸ್ ಮಾಡುವ ಕನಸು, ನಿಖರ ಗುರಿಯನ್ನಿಟ್ಟುಕೊಂಡು ಹಠ ಮತ್ತು ಛಲ ಹೊತ್ತು ಹೋರಾಡಿದ್ದರ ಫಲವೇ ಐಎಎಸ್ ಎಂಬ ಕನಸಿನ ಹುದ್ದೆಯನ್ನು ನನಸು ಮಾಡಿಕೊಂಡೆ. ಎಲ್ಲ ಸಮಸ್ಯೆಯಗಳ ಸುಳಿಯ ನಡುವೆಯೇ ಛಲ ಬಿಡದ ಆತ್ಮವಿಶ್ವಾಸ, ಬಂಡೆಯಂತಹ ಗಟ್ಟಿ ಮನಸ್ಸು ಮತ್ತು ಅಚಲ ನಿರ್ಧಾರ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದರು.
ಯಶಸ್ಸು ನಿಧಾನವಾದರೂ ಪರವಾಗಿಲ್ಲ, ಸೋಲಿಗೆ ಅಂಜದಿರಿ. ಗುರಿಯೆಡೆಗೆ ಇಟ್ಟ ದೃಢ ಹೆಜ್ಜೆಯನ್ನು ಎಂದೂ ಕದಲಿಸಬೇಡಿ. ಐಎಎಸ್ ಕನಸು ನನಸಾದರೆ ನಿಮ್ಮ ಇಡೀ ಕುಟುಂಬದ ಜೀವನ 360 ಡಿಗ್ರಿಯಲ್ಲಿ ಬದಲಾಗುತ್ತದೆ ಎಂದರು.
ಯಾವುದೋ ಹೀರೋ ಅಥವಾ ಬ್ರಾೃಂಡ್ ಆರ್ಕಷಣೆಗೆ ಒಳಗಾಗದೆ ನಮ್ಮ ಬದುಕಿಗೆ ನಾವೇ ಹೀರೋ ಮತ್ತು ಸ್ವತಃ ನಾವೇ ಬ್ರಾೃಂಡ್ ಆಗಬೇಕು. ಮೊದಲು ಸ್ವಾರ್ಥಿಗಳಾಗಿ, ಅಂದರೆ ಮೊದಲು ನೀವು ನಿಮ್ಮ ಕಾಲಮೇಲೆ ಸದೃಢವಾಗಿ ನಿಂತರೆ ನೂರಾರು ಜನರನ್ನು ಮೇಲಕ್ಕೆ ಎತ್ತುವ ತಾಕತ್ತು ಮತ್ತು ಶಕ್ತಿ ಬರುತ್ತದೆ.
ಈ ಹಿನ್ನೆಲೆಯಲ್ಲಿ ನಾನು ಸ್ವಾರ್ಥಿ ಪದ ಬಳಕೆ ಮಾಡಿದ್ದು. ಮೊದಲೇ ನಿಸ್ವಾರ್ಥಿಯಾದರೆ ದೊಡ್ಡದಾಗಿ ಮತ್ತು ವಿಸ್ತಾರವಾಗಿ ಸಮಾಜ ಸೇವೆ ಮಾಡಲು ಅಸಾಧ್ಯವಾಗುತ್ತದೆ ಎಂದು ಸ್ವಾರ್ಥದ ಧನಾತ್ಮಕ ಹಿನ್ನೆಲೆಯನ್ನು ವಿವರಿಸಿದರು.
ಹಿರಿಯ ಸಹಕಾರಿ ವೈ.ಎನ್.ಶಂಕರೇಗೌಡ ಮಾತನಾಡಿ, ಆಸಕ್ತಿ ಮತ್ತು ಕಠಿಣ ಪರಿಶ್ರಮ ಎರಡೂ ಸೇರಿದರೆ ಮಾತ್ರ ಗೆಲುವು ಸಾಧ್ಯ. ಜನೋಪಯೋಗಿ ಕೆಲಸ-ಕಾರ್ಯಗಳ ಮೂಲಕ ಶ್ರೀಸಾಮಾನ್ಯರ ಕಣ್ಣಿಗೆ ಸಾಕ್ಷಾತ್ ಭಗವಂತನ ರೂಪದಲ್ಲಿ ಕಾಣಿಸಿಕೊಳ್ಳಬಹುದಾದ ಅವಕಾಶ ಈ ಐಎಎಸ್ ಹುದ್ದೆಗಿದೆ ಎಂದರು.
ಪ್ರೊ.ಎಚ್.ಎಂ.ರಾಜಶೇಖರ್, ಪ್ರೊ. ಕೃ.ಪ.ಗಣೇಶ, ಜೈನಹಳ್ಳಿ ಸತ್ಯನಾರಾಯಣಗೌಡ, ಎಚ್.ಬಾಲಕೃಷ್ಣ, ಪ್ರೊ.ಹೊನ್ನಯ್ಯ, ಪ್ರೊ.ವಿ.ಜಯಪ್ರಕಾಶ್, ಕೆ.ವೈ.ನಾಗೇಂದ್ರ, ಕಿರಣ್ ಕೌಶಿಕ್, ಯು.ಎಂ. ಶರದ್ ರಾವ್, ಈ ಶಿವಪ್ರಸಾದ್, ಡಾ. ಎಸ್.ಬಿ.ಎಂ. ಪ್ರಸನ್ನ ಉಪಸ್ಥಿತರಿದ್ದರು.