

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಜೆಎಸ್‌ಎಸ್ ಕಾಲೇಜಿನ ಉತ್ಸವ ಸಭಾಂಗಣದಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್, ಜೆಎಸ್‌ಎಸ್ ಕಾಲೇಜು, ರೋಟರಿ ಕ್ಲಬ್ ಆಫ್ ಧಾರವಾಡ ಹಾಗೂ ಸೆವೆನ್ ಹಿಲ್ಸ್ ಧಾರವಾಡ ವತಿಯಿಂದ ಧಾರವಾಡ ಅಭಿವೃದ್ಧಿಗೆ ಹೊಸ ದೃಷ್ಟಿಕೋನ ಸಂವಾದವನ್ನು ಭಾನುವಾರ ನಡೆಸಲಾಯಿತು.
ನಿರಂತರ ನೀರು ಸರಬರಾಜಿನಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು, ಅವಳಿನಗರ ಎಲ್ಲ ವಾರ್ಡ್‌ಗಳಿಗೆ ನಿರಂತರ ನೀರು ಪೂರೈಸಲು ಇನ್ನೂ ಒಂದು ವರ್ಷ ಬೇಕು. ಈಗ 24 ವಾರ್ಡ್‌ಗಳನ್ನು ಬಿಟ್ಟರೆ ಬಾಕಿ ಕಡೆಗಳಲ್ಲಿ 5-6 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಸಮಸ್ಯೆ ಬಗೆ ಹರಿಸಲು ಕಾಲಾವಕಾಶ ಬೇಕು. ನೀರಿನ ಸಮಸ್ಯೆ ಕುರಿತಾಗಿ ಸರಣಿ ಸಭೆ ಮಾಡಲಾಗಿದೆ ಎಂದರು.
ಘನ ತ್ಯಾಜ್ಯ ಹಾಗೂ ದ್ರವ ತ್ಯಾಜ್ಯ ನರ್ವಹಣೆಯಲ್ಲಿ ನಮ್ಮದೇ ತಪ್ಪಿದೆ. ನಿರ್ವಹಣೆಗೆ ವಿವಿಧ ಪ್ರದೇಶಗಳಿಂದ ಟೆಂಡರ್ ಕರೆಯಲಾಗಿದೆ. ಜನರೂ ಈ ವಿಚಾರದಲ್ಲಿ ಜಾಗೃತರಾಗಿ ತ್ಯಾಜ್ಯ ವಿಂಗಡಿಸಿ ಸಹಕರಿಸಬೇಕು. ಗಂಗೂಬಾಯಿ ಹಾನಗಲ್ ನಿವಾಸ ನವೀಕರಣಕ್ಕೆ ಬದ್ಧರಾಗಿದ್ದೇವೆ. ಎಲ್ಲರೂ ಸೇರಿ ಪ್ರಸ್ತಾವ ಸಲ್ಲಿಸಿದಲ್ಲಿ ಸಂಬಂಧಿಸಿದ ಇಲಾಖೆಗೆ ತಿಳಿಸಲು ಸಾಧ್ಯವಾಗುತ್ತದೆ ಎಂದರು.
ಸಭೆ ಸಮಾರಂಭಗಳನ್ನು ಮಾಡಲು ಸಭಾಭವನಗಳ ಕೊರತೆ ಇದೆ. ಇದ್ದ ಸಭಾಭವನಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ಇದಕ್ಕೆ ಪ್ರಕ್ರಿಯಿಸಿದ ಲಾಡ್, ಸಭಾಭವನಗಳ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜೆಎಸ್‌ಎಸ್ ಕಾಲೇಜು ಮುಂಭಾಗದಲ್ಲಿ ಬಿಆರ್‌ಟಿಎಸ್ ರಸ್ತೆ ದಾಟಲು ವಿದ್ಯಾರ್ಥಿಗಳಿಗೆ ಹಾಗೂ ಪಾದಾಚಾರಿಗಳಿಗೆ ತೊಂದರೆಯಾಗುತ್ತಿದೆ. ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂದು ಕಾಲೇಜಿನ ವತಿಯಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಉಳಿದಂತೆ ಶೌಚಗೃಹಗಳ ನಿರ್ಮಾಣ ಹಾಗೂ ನಿರ್ವಹಣೆ, ಬಿಆರ್‌ಟಿಎಸ್ ಯೋಜನೆಯೆಯಿಂದ ಆಗುತ್ತಿರುವ ತೊಂದರೆ ತೊಂದರೆ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಜನರು ಸಚಿವರ ಗಮನಕ್ಕೆ ತಂದರು.
ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಮಹಾವೀರ ಉಪಾಧ್ಯೆ, ಅಸೋಶಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಧ್ಯಕ್ಷ ಸುನೀಲ ಬಾಗೇವಾಡಿ, ಕಾರ್ಯದರ್ಶಿ ಅರುಣ ಶೀಲವಂತ, ಡಾ. ಕವನ ದೇಶಪಾಂಡೆ, ಪ್ರೀತಿ ಮಂತ್ರಿ, ವಿಜಯ ತೋಟಗೇರಿ, ಸಂಗೀತಾ ಬಾಗೇವಾಡಿ, ಡಾ. ಅವಿನಾಶ, ಶರಯೂ ನಾಯಕ ಇತರರು ಇದ್ದರು.