ನಿರಂತರ ನೀರು ಪೂರೈಕೆ ಟೆಂಡರ್‌ಗೆ ಅಸ್ತು

20BK1
ಬಸವಕಲ್ಯಾಣ ನಗರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಅಮ್ಜದ್ ನವರಂಗ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಎಂಡಿ.ಸಗಿರೋದ್ದಿನ್, ಉಪಾಧ್ಯಕ್ಷ ಲಕ್ಷ್ಮೀಬಾಯಿ ಫುಲೆ, ಪೌರಾಯುಕ್ತ ರಾಜು ಬಣಕಾರ ಇದ್ದರು.
Published on

ಬಸವಕಲ್ಯಾಣ: ನಗರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರದಲ್ಲಿ ನಿರಂತರ ಕುಡಿಯುವ ನೀರು ಪೂರೈಕೆಗೆ ಟೆಂಡರ್ ಕರೆಯಲು ಅನುಮೋದನೆ ನೀಡಲಾಯಿತು. ಆದರೆ ವಾಹನಗಳ ಡೀಸೆಲ್‌ಗೆ ಮೂರು ಲಕ್ಷ ರೂ. ಬಳಸಿರುವುದು ಬಿರುಸಿನ ಚರ್ಚೆಗೆ ಎಡೆಮಾಡಿಕೊಟ್ಟಿತು.

ಎಂಡಿ ಸಗಿರೋದ್ದಿನ್ ಅಧ್ಯಕ್ಷರಾದ ನಂತರ ಮೊದಲ ಸಾಮಾನ್ಯ ಸಭೆ ಆರಂಭವಾಗುತ್ತಿದ್ದAತೆ ೨೦೨೩ರ ಜನವರಿಯಿಂದ ೨೦೨೫ರ ಜನವರಿವರೆಗೆ ಜಮಾ-ಖರ್ಚು ಒದುವಾಗ ಡೀಸೆಲ್ ಸಂಬAಧ ನಮೂದಿಸಿದ ಖರ್ಚಿನ ಬಗ್ಗೆ ಕೆಲ ಸದಸ್ಯರು ಆಕ್ಷೇಪ ಎತ್ತಿದರು.

೨೦೨೩ರಲ್ಲಿ ತಿಂಗಳಿಗೆ ೩.೫೫ ಲಕ್ಷ ರೂ. ಡೀಸಲ್ ಖರ್ಚು ತೋರಿಸಲಾಗಿದೆ. ಆದರೆ ಇಷ್ಟು ವಾಹನಗಳು ಓಡಾಡುತ್ತವೆ ಎಂದಾದರೆ ನಗರದಲ್ಲಿ ಸ್ವಚ್ಛತೆ ಏಕಿಲ್ಲ? ಖರ್ಚಿನ ಬಗ್ಗೆ ಸಂಶಯವಿದ್ದು, ಸಂಬAಧಿತರು ಸ್ಪಷ್ಟನೆ ನೀಡಬೇಕು ಎಂದು ನಿರ್ಮಲಾ ಶಿವಣಕರ್ ಒತ್ತಾಯಿಸಿದರು.

ಡೀಸೆಲ್ ಜತೆ ವಾಹನ ಬಾಡಿಗೆಗೂ ಹೆಚ್ಚು ಖರ್ಚು ತೋರಿಸಲಾಗಿದೆ ಎಂದು ಶಾಹೇದಾಬಾನು ಖುರೇಶಿ ಆಕ್ಷೇಪ ಎತ್ತಿದರು. ಖರ್ಚು-ವೆಚ್ಚ ಪರಿಶೀಲನೆಗೆ ಕಮಿಟಿ ರಚಿಸಬೇಕು ಎಂದು ರವಿ ಬೋರಾಳೆ ಸಲಹೆ ನೀಡಿದರು.

ಖರ್ಚು-ವೆಚ್ಚದ ಬಗ್ಗೆ ಸಂಶಯ ಅಥವಾ ಆಕ್ಷೇಪವಿದ್ದರೆ ಈ ವಿಷಯದ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸೋಣ ಎಂದು ಅಧ್ಯಕ್ಷ ಸಗಿರೋದ್ದಿನ್ ಚರ್ಚೆಗೆ ತೆರೆ ಎಳೆದರು. ಸದಸ್ಯರ ಅಭಿಪ್ರಾಯ ಮತ್ತು ಸಲಹೆಗಳನ್ನು ಪರಿಗಣಿಸಿ ಸಭೆ ನಿರ್ಣಯದಂತೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗುವುದು ಎಂದು ಪೌರಾಯುಕ್ತ ರಾಜು ಬಣಕಾರ ತಿಳಿಸಿದರು.

ನಿರಂತರ ಕುಡಿಯುವ ನೀರು ಪೂರೈಸುವ ಏಜೆನ್ಸಿ ಅವಧಿ ಫೆ.೨೮ರಂದು ಮುಗಿಯಲಿದ್ದು, ಹೊಸದಾಗಿ ಟೆಂಡರ್ ಸಂಬಂಧ ಚರ್ಚಿಸಿದ ನಂತರ ಬಹುತೇಕ ಸದಸ್ಯರು ಟೆಂಡರ್ ಕರೆಯಬೇಕು ಎಂದು ಹೇಳಿದರೆ, ಸದಸ್ಯರೊಬ್ಬರು ಹೊರಗಿನವರಿಗೆ ಟೆಂಡರ್ ಬೇಡ. ನಗರಸಭೆಯಿಂದಲೇ ನಿರ್ವಹಣೆ ಮಾಡಿ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.

ನಿರಂತರ ನೀರು ಯೋಜನೆ ಎಂದರೆ ದಿನದ ೨೪ ಗಂಟೆ ನೀರು ಬರಬೇಕು. ಆದರೆ ಬರುತ್ತಿಲ್ಲ ಎಂದು ಇಬ್ಬರು ಸದಸ್ಯರು ತಕರಾರು ಎತ್ತಿದರು. ದಿನದ ೨೪ ಗಂಟೆ ಪೂರೈಕೆ ಮಾಡಿದರೆ ಮೂರು ತಿಂಗಳಲ್ಲಿ ನೀರು ಖಾಲಿ ಆಗುತ್ತದೆ. ಬೇಸಿಗೆಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಿದೆ. ಸಮರ್ಪಕ ನೀರು ಪೂರೈಕೆಗಾಗಿ ಟೆಂಡರ್ ಕರೆಯುವುದು ಸೂಕ್ತ ಎಂದು ಗಫಾರ್ ಪೇಶಮಾಮ್ ಹೇಳಿದರು.

ಈಗ ನೀರು ಪೂರೈಕೆ ಮಾಡುತ್ತಿರುವವರ ಬಳಿಯೂ ಕಲ್ಯಾಣದವರೇ ಕೆಲಸ ಮಾಡುತ್ತಿದ್ದಾರೆ ಎಂದು ರಾಮ ಜಾಧವ್ ಹೇಳಿದರು. ಟೆಂಡರ್ ಕರೆದು ಸರಿಯಾಗಿ ಕೆಲಸ ಮಾಡಿಸಿಕೊಳ್ಳಬೇಕೆಂದು ಡಾ.ಖದೀರೋದ್ದಿನ್ ಸಲಹೆ ನೀಡಿದರು.

ನಿರಂತರ ನೀರು ಪೂರೈಕೆಗೆ ಟೆಂಡರ್ ಕರೆಯಲು ಸಭೆ ನಿರ್ಧರಿಸಿದ್ದು, ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಎರಡು ತಿಂಗಳು ಈಗ ನಿರ್ವಹಿಸುತ್ತಿರುವರಿಗೆ ಜವಾಬ್ದಾರಿ ವಹಿಸಲು ತೀರ್ಮಾನಿಸಲಾಗಿದೆ ಎಂದು ಪೌರಾಯುಕ್ತರು ತಿಳಿಸಿದರು.

೨೦೨೪-೨೫ರ ಎಸ್‌ಎಫ್‌ಸಿ ಹಾಗೂ ೧೫ನೇ ಹಣಕಾಸು ಯೋಜನೆಯಡಿ ಹಂಚಿಕೆಯಾದ ಅನುದಾನದಲ್ಲಿ ಕ್ರಿಯಾಯೋಜನೆಯಂತೆ ಟೆಂಡರ್ ಕರೆಯಲು ಅನುಮೋದನೆ ನೀಡಲಾಯಿತು.

ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಫುಲೆ, ಪವನ್ ಗಾಯಕವಾಡ, ಎಜಾಜ್ ಲಾತೂರೆ, ಇಮ್ರಾನ್ ಖಾನ್, ರೇಖಾಬಾಯಿ ಮೇತ್ರಸಕರ್, ಮಲ್ಲಿಕಾರ್ಜುನ ಬೊಕ್ಕೆ, ಮುಸಾಮಿಯಾ, ಮೋಯಿನ್ ಪಾಶಾ, ಶಮೀಯೊದ್ದಿನ್ ಇತರರಿದ್ದರು.

ಸುರಕ್ಷತಾ ಕ್ರಮ ಕೈಗೊಳ್ಳಿ: ನಗರದ ರಸ್ತೆಗೆ ಅಗತ್ಯವಿರುವ ಕಡೆ ಸ್ಪೀಡ್ ಬ್ರೇಕರ್ ಅಳವಡಿಸಬೇಕು. ಹೊಸ ಮನೆಗಳನ್ನು ನಿರ್ಮಿಸುವಾಗ ಅನುಮತಿ ನೀಡುವ ಮುನ್ನ ಸಿಸಿ ಕ್ಯಾಮರಾ ಅಳವಡಿಸುವಂತೆ ಷರತ್ತು ವಿಧಿಸಬೇಕು ಎಂದು ಸಿಪಿಐ ಅಲಿಸಾಬ್ ಸಲಹೆ ನೀಡಿದರು. ನಗರದ ಸರ್ಕಾರಿ ಆಸ್ಪತ್ರೆ ಮಾರ್ಗದಲ್ಲಿ ಫಲಕ ಅಳವಡಿಸಬೇಕು. ಡಸ್ಟ್ ಬಿನ್ ಇಡಬೇಕೆಂದು ಮುಖ್ಯ ವೈದ್ಯಾಧಿಕಾರಿ ಡಾ.ಅಪರ್ಣ ಮನವಿ ಮಾಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನವರಂಗ: ಸಾಮಾನ್ಯ ಸಭೆಯಲ್ಲಿ ವಾರ್ಡ್ ೨೭ರ ಸದಸ್ಯ ಅಮ್ಜದ್ ನವರಂಗ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಮಾಡಲಾಯಿತು. ಸಮಿತಿಗೆ ಉಳಿದ ೧೦ ಸದಸ್ಯರನ್ನು ಸಹ ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net