ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಪೂರೈಕೆ ಮಾಡಿ

22 HANUR 1
ನಿರಂತರ ಜ್ಯೋತಿ ಯೋಜನೆಯಡಿ ಗ್ರಾಮಕ್ಕೆ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಸೋಮವಾರ ಮಾಲಿಂಗನತ್ತ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Published on

ಅವಿನಾಶ

ಹನೂರು: ನಿರಂತರ ಜ್ಯೋತಿ ಯೋಜನೆಯಡಿ ಗ್ರಾಮಕ್ಕೆ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಸೋಮವಾರ ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಿಂಗನತ್ತ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ 62 ಕುಟುಂಬಗಳಿದ್ದು, ಸುಮಾರು 250ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಸರ್ಕಾರ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವ ಉದ್ದೇಶದಿಂದ ನಿರಂತರ ಜ್ಯೋತಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಲೊಕ್ಕನಹಳ್ಳಿ ಹೋಬಳಿಯ ಎಲ್ಲ ಗ್ರಾಮಗಳಲ್ಲಿ ಈಗಾಗಲೇ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಆದರೆ ಸೆಸ್ಕ್ ಅಧಿಕಾರಿಗಳು ಕಡಿಮೆ ಜನಸಂಖ್ಯೆ ಎಂಬ ನೆಪವೊಡ್ಡಿ ಪಿ.ಜಿ.ಪಾಳ್ಯ ಗ್ರಾಪಂ ವ್ಯಾಪ್ತಿಯ ಮಾಲಿಂಗನತ್ತ, ಬಸವನಗುಡಿ, ನಲ್ಲಿಮರದ ದೊಡ್ಡಿ ಹಾಗೂ ಇತರ ಗ್ರಾಮಗಳನ್ನು ಈ ಯೋಜನೆಯಿಂದ ಕೈ ಬಿಟ್ಟಿದ್ದಾರೆ. ಈ ಗ್ರಾಮಗಳ ಮುಖಾಂತರವೇ ಮುಂದಿನ ಗ್ರಾಮಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಪ್ರತಿಭಟನಾನಿರತರು ಕಿಡಿಕಾರಿದರು.
ಈಗಾಗಲೇ ಗ್ರಾಮಗಳಿಗೆ 7 ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಈತನ್ಮಧ್ಯೆ ಮಳೆ, ಗಾಳಿಗೆ ಆಗಾಗ್ಗೆ ವಿದ್ಯುತ್ ಕಡಿತವಾಗುತ್ತದೆ. ಇದರಿಂದ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸೆಸ್ಕ್ ಅಧಿಕಾರಿಗಳು ಇತ್ತ ಗಮನಹರಿಸಿ ಈ ಯೋಜನೆ ಮೂಲಕ ನಿರಂತರ ವಿದ್ಯುತ್ ಪೂರೆಕೆ ಮಾಡುವಂತೆ ಒತ್ತಾಯಿಸಿದರು.
ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಪೂರೈಸಲು ಸಂಬಂಧ ಗ್ರಾಮಗಳ ಪಟ್ಟಿ ತಯಾರಿಸಿ, ಡಿಪಿಆರ್ ಸಿದ್ಧಪಡಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಅನುಮೋದನೆ ದೊರೆತು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಯೋಜನೆಯನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಸೆಸ್ಕ್ ಎಇಇ ಶಂಕರ್ ವಿಜಯವಾಣಿಗೆ ಮಾಹಿತಿ ನೀಡಿದರು.
ಪ್ರತಿಭಟನೆಯಲ್ಲಿ ಸ್ಥಳೀಯರಾದ ಸೆಂದಿಲ್‌ಕುಮಾರ್, ಜಡೇಸ್ವಾಮಿ, ಬಸವಣ್ಣ, ಚಿನ್ನಸ್ವಾಮಿ, ಮಹದೇವಸ್ವಾಮಿ, ಷಣ್ಮುಗಂ, ಸೆಲ್ವರಾಜು, ಸತೀಶ್‌ಕುಮಾರ್, ಶಿವಕುಮಾರ್, ಮಂಜುಳಾ, ಕಮಲಮ್ಮ, ಮಹೇಶ್ವರಿ, ಹೇಮಾವತಿ, ಸರೋಜಮ್ಮ, ವನಜಮ್ಮ, ಕಣ್ಣಮ್ಮ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಜನರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net