

ಉಡುಪಿ: ಚಾಂದ್ರ ಕೃಷ್ಣಾಷ್ಟಮಿ ಅಂಗವಾಗಿ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಸಂದೇಶ ನೀಡಿದ್ದಾರೆ.
ಕೃಷ್ಣ ಸುಲಭದಲ್ಲಿ ದೊರೆಯುವುದಿಲ್ಲ. ಆತನನ್ನು ಪಡೆಯಲು ನಿರಂತರ ಚಿಂತನೆ ಅಗತ್ಯ. ಸಾತ್ವಿಕ ಗುಣ ಅಳವಡಿಸಿಕೊಂಡವರಿಗೆ ಕೃಷ್ಣ ದೊರಕುತ್ತಾನೆ. ಕೃಷ್ಣನ ಜೀವನ ಕಥೆಯೇ ವಿಚಿತ್ರ. ತುಂಬ ಸಾಮರ್ಥ್ಯವಿದ್ದರೂ ಯುದ್ಧ ಬಿಟ್ಟು ಓಡಿಹೋಗಿದ್ದಾನೆ. ಬಲಿಷ್ಠವಾಗಿದ್ದ ಕಂಸನನ್ನು ಬಾಲ್ಯದಲ್ಲೇ ಅನಾಯಾಸವಾಗಿ ಕೊಂದಿದ್ದಾನೆ. ಈ ಬಗ್ಗೆ ಸೂಕ್ಷ್ಮವಾಗಿ ಅವಲೋಕನ ಮಾಡಿದಾಗ, ರಾಜನಾದವನು ಪ್ರಜೆಗಳಿಗೆ ತೊಂದರೆಯಾಗುವ ಸಮಯದಲ್ಲಿ ಸಣ್ಣ ತ್ಯಾಗಕ್ಕೆ ಸಿದ್ಧನಾಗಬೇಕು ಎಂಬ ಲೋಕನೀತಿ ಇದರಿಂದ ತಿಳಿಯುತ್ತದೆ.
ಇದಕ್ಕಾಗಿ ದೊಡ್ಡ ಸೈನ್ಯ ಬಂದಾಗ ಊರನ್ನೇ ಖಾಲಿ ಮಾಡಿಸಿದ್ದಾನೆ. ಜತೆಗೆ ಜರಾಸಂಧನನ್ನು ಒಮ್ಮೆಲೇ ಕೊಂದರೆ ದುಷ್ಟ ಸಮೂಹ ನಾಶವಾಗುವುದಿಲ್ಲ. ಹೀಗಾಗಿ ದುಷ್ಟಕೂಟದ ನಿರ್ಮೂಲನೆಗಾಗಿ ಪ್ರತೀ ಬಾರಿ ಕೃಷ್ಣ ಅವನ್ನು ಬಿಟ್ಟುಕಳುಹಿಸಿದ್ದಾನೆ. ಹೀಗೆ ಕೃಷ್ಣ ನಡೆ ಸುಲಭದಲ್ಲಿ ಅರ್ಥವಾಗುವುದಿಲ್ಲ. ಇಂಥ ಮಹಿಮಾನ್ವಿತ ಭಗವಂತನ ಗುಣಗಳನ್ನು ಚಿಂತನೆ ಮಾಡುವ ಮೂಲಕ ಆರಾಧಿಸೋಣ ಎಂದವರು ತಿಳಿಸಿದ್ದಾರೆ.