

ಸೋಮವಾರಪೇಟೆ: ಶೈಕ್ಷಣಿಕ ಕ್ಷೇತ್ರದ ಪ್ರಗತಿಯಲ್ಲಿ ದೇಶದ ಪ್ರಗತಿ ಕಾಣಬಹುದು ಎಂದು ಮಡಿಕೇರಿ ಶಾಸಕ ಡಾ.ಮಂತರ್ಗೌಡ ಹೇಳಿದರು.
ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಾಗಿದೆ. ಆರ್ಥಿಕ ಸಮಸ್ಯೆಯಿಂದ ಯಾವ ಮಕ್ಕಳ ವಿದ್ಯಾಭ್ಯಾಸ ನಿಲ್ಲಬಾರದು, ಇಂತಹ ಸಂಕಷ್ಟದ ಸಮಯದಲ್ಲಿ ಬಡಕುಟುಂಬದ ಮಕ್ಕಳಿಗೆ ಆರ್ಥಿಕ ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ ಕೂಡ ಎಂದರು.
ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲೂ ಮುಂದೆ ಇರಬೇಕು. ಕಲಿಕೆ ಆರೋಗ್ಯವೂ ಮುಖ್ಯವಾಗಿರುತ್ತದೆ. ಕ್ರೀಡಾಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಅತೀ ಬುದ್ದಿವಂತರು ಮಾತ್ರ ಉನ್ನತ ಹುದ್ದೆಯನ್ನು ಪಡೆಯಲು ಸಾಧ್ಯ ಎಂಬ ಭ್ರಮೆ ಯಾರಿಗೂ ಬೇಡ. ನಾನು ಕೂಡ ವೀಕ್ ಸ್ಟೂಡೆಂಟ್ ಆಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡಿದ್ದೇನೆ. ಆದ್ದರಿಂದ ಯಾರಿಗೂ ಕೀಳರಿಮೆ ಬೇಡ, ನಿರಂತರ ಕಲಿಕೆಯಿಂದ ಸಾಧನೆ ಮಾಡಬಹುದು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಮಾತನಾಡಿ, ವಿದ್ಯಾರ್ಥಿ ಜೀವನ ಒಂದೇ ಬಾರಿ ಬರುವುದು. ವಿದ್ಯಾರ್ಥಿಗಳಿಗೂ ನೀತಿ ಸಂಹಿತೆ ಇದೆ. ಅದನ್ನು ಪರಿಪಾಲಿಸಲೇಬೇಕು. ಯಶಸ್ಸಿನ ತತ್ವಗಳನ್ನು ಪ್ರತಿದಿನ ಕಲಿಯಬೇಕು. ಮನೋಭಾವನೆಯೇ ಸರ್ವಸ್ವ, ವಿದ್ಯಾರ್ಥಿಗಳಲ್ಲಿ ಸಮತೋಲನ ವ್ಯಕಿತ್ವ ನಿರ್ಮಾಣ ಆಗಬೇಕಿದೆ. ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ದಾರ್ಶನಿಕರ ಉಪದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.