

ಪಿರಿಯಾಪಟ್ಟಣ: ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಲ್ಲಿ ಮಾರಣಾಂತಿಕ ರೋಗಗಳಿಂದ ಪಾರಾಗಬಹುದಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಆರ್.ನಿರೂಪಾ ಅಭಿಪ್ರಾಯಪಟ್ಟರು.
ತಾಲೂಕಿನ ಮುತ್ತೂರು ಗ್ರಾಮದಲ್ಲಿ ಮೈಸೂರಿನ ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆಯ ಸಹಯೋಗದೊಂದಿಗೆ ಗುರು ಮೆಡಿಕಲ್ಸ್ , ಶ್ರೀ ಕ್ಲಿನಿಕ್, ರೋಟರಿ ಪಿರಿಯಾಪಟ್ಟಣ ಐಕಾನ್ಸ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆಗಳ ಕೊರತೆಯಿಂದಾಗಿ ನಗರ ಪ್ರದೇಶಗಳಿಗೆ ಚಿಕಿತ್ಸೆಗಾಗಿ ಹೋಗುವ ಅನಿವಾರ್ಯ ಪರಿಸ್ಥಿತಿ ಇಂದಿಗೂ ಇದೆ. ಹಲವು ಸಂದರ್ಭದಲ್ಲಿ ರೈತ ಮಹಿಳೆಯರು, ವೃದ್ಧರು, ಮಕ್ಕಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದೆ ತೊಂದರೆ ಅನುಭವಿಸಿರುವ ನಿದರ್ಶನಗಳು ಸಾಕಷ್ಟು ಇವೆ. ಯಾವುದೇ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣವಾಗಿ ಗುಣಮುಖವಾಗುವ ಸಾಧ್ಯತೆ ಇದೆ. ತಮಗೆ ಆರೋಗ್ಯದಲ್ಲಿ ಕಂಡುಬರುವ ಸಮಸ್ಯೆಗಳನ್ನು ನಿರ್ಲಕ್ಷೃ ತೋರದೆ ಕಡ್ಡಾಯವಾಗಿ ವೈದ್ಯರ ಬಳಿ ತೆರಳಿ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತೆ ಕಾರ್ಯಕ್ರಮ ಸಂಯೋಜಕ ಕೆ.ಬಿ.ಮಹೇಶ್ ಮಾತನಾಡಿ, ಗ್ರಾಮೀಣ ಪ್ರದೇಶಗಳ ಜನರಿಗೆ ಉತ್ತಮ ವೈದ್ಯಕೀಯ ಸೇವೆ ದೊರಕಬೇಕೆನ್ನುವ ಉದ್ದೇಶದಿಂದ ಗ್ರಾಮಗಳಿಗೆ ತೆರಳಿ ಆರೋಗ್ಯ ಉಚಿತ ತಪಾಸಣೆ ಮಾಡಲಾಗುತ್ತಿದ್ದು, ಯಾವುದೇ ರೀತಿಯ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಮೈಸೂರಿನ ಆಸ್ಪತ್ರೆಗೆ ಬಂದಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಪುರಸಭೆ ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಮಾತನಾಡಿದರು. ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆಯ ವೈದ್ಯೆ ಪೂರ್ವಿಕಾ, ಗುರು ಮೆಡಿಕಲ್ಸ್ ನ ಮಾಲೀಕ ರಘುಪತಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸತೀಶ್ ಆರಾಧ್ಯ, ರೋಟರಿ ಪಿರಿಯಾಪಟ್ಟಣ ಐಕಾನ್ಸ್ ನಿರ್ದೇಶಕ ಸಿ.ಎನ್.ವಿಜಯ್, ಶ್ರೀ ಕರುನಾಡ ಜನ ಜಾಗೃತಿ ವೇದಿಕೆ ಅಧ್ಯಕ್ಷ ಸಚ್ಚಿದಾನಂದ, ಮುಖಂಡರಾದ ರಾಜೇಗೌಡ, ನಂದೀಶ್ ಇತರರು ಇದ್ದರು.