

ಕೊಪ್ಪಳ : ಮುಂಗಾರು ಹಂಗಾಮಿನ ಬೆಳೆ ಸಮೀಕ್ಷಾ ಕಾರ್ಯವನ್ನು ಸಿಸಿಇ ನಿಯಮ ಪ್ರಕಾರ ಕೈಗೊಳ್ಳುವಂತೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೆಳೆ ಸಮೀಕ್ಷೆ ಮೇಲ್ವಿಚಾರಕರು, ಮೂಲ ಕಾರ್ಯಕರ್ತರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಮೂಲ ಕಾರ್ಯಕರ್ತರು ಸ್ವತಃ ಜಮೀನಿಗೆ ತೆರಳಿ. ಕಾರ್ಯಕರ್ತರು, ರೈತರೊಂದಿಗೆ ಸಂಪರ್ಕದಲ್ಲಿರಿ. ಕಟಾವು ದಿನಾಂಕ ಖಚಿತಪಡಿಸಿಕೊಂಡು ಅವರ ಸಮಕ್ಷಮದಲ್ಲಿ ಬೆಳೆ ಕಟಾವು ಕೈಗೊಳ್ಳಿ. ಯಾವುದೇ ಸಂದರ್ಭದಲ್ಲಿಯೂ ಕಟಾವು ಪ್ರಯೋಗಗಳು ವ್ಯತ್ಯಾಸವಾಗದಂತೆ ನೋಡಿಕೊಳ್ಳಿ. ಮೇಲ್ವಿಚಾರಣಾಧಿಕಾರಿಗಳು ಕಟಾವು ಸಮಯದಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ನಿರ್ದೇಶನ ನೀಡಿದರು.
ಎಡಿಸಿ ಸಾವಿತ್ರಿ ಕಡಿ ಮಾತನಾಡಿ, ಬೆಳೆ ಅಂದಾಜು ಸಮೀಕ್ಷಾ ಕಾರ್ಯಕ್ಕೆ ಕಂದಾಯ, ಕೃಷಿ, ತೋಟಗಾರಿಕೆ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳನ್ನು ಮೂಲಕಾರ್ಯಕರ್ತರಾಗಿ ನೇಮಿಸಲಾಗಿದೆ. ಅಧಿಕಾರಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಯೋಗಗಳನ್ನು ಹಂಚಿಕೆ ಮಾಡಲಾಗಿದೆ. ಮೂಲ ಕಾರ್ಯಕರ್ತರು ಬೇರೆಡೆ ವರ್ಗಾವಣೆಯಾದರೆ, ಹಂಚಿಕೆಯಾದ ಪ್ರಯೋಗಗಳನ್ನು ಇನ್ನೊಬ್ಬರಿಗೆ ನೀಡಿ, ಸಮೀಕ್ಷಾ ಮೊಬೈಲ್ ಹಸ್ತಾಂತರಿಸಬೇಕು. ಪ್ರತಿ ವಾರ ತಹಸೀಲ್ದಾರ್‌ಗಳು, ಕೃಷಿ, ತೋಟಗಾರಿಕೆ ಸಹಾಯಕ ನಿರ್ದೇಶಕರು ಸಭೆ ನಡೆಸಿ ಸಮೀಕ್ಷಾ ಪ್ರಗತಿ ಪರಿಶೀಲಿಸಬೇಕು. ನಿಮಗೆ ನೀಡಿದ ಪಟ್ಟಿಯಲ್ಲಿನ ಬೆಳೆಗಳ ಸಮೀಕ್ಷೆ ಮಾತ್ರ ಮಾಡಿ. ಯಾವುದೇ ಕಾರಣಕ್ಕೆ ಬೆಳೆ ಬದಲಾವಣೆ ಮಾಡುವಂತಿಲ್ಲ. ಮಾಹಿತಿ ಸರಿಯಾಗಿ ನಮೂದಿಸುವಂತೆ ತಾಕೀತು ಮಾಡಿದರು.
ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಮಾತನಾಡಿ, ಕೃಷಿ ಇಲಾಖೆ ಹೊರಡಿಸಿದ ಅಧಿಸೂಚನೆ ಪ್ರಕಾರ ಹೋಬಳಿವಾರು ಮತ್ತು ಗಾಪಂವಾರು ವಿಮಾ ಘಟಕದಲ್ಲಿ ಕೈಗೊಳ್ಳಬಹುದಾದ ವಿವಿಧ ಬೆಳೆಗಳ ಬೆಳೆ ಅಂದಾಜು ಸಮೀಕ್ಷೆಯ ಯೋಜನಾ ಪಟ್ಟಯನ್ನು ತಯಾರಿಸಲಾಗಿದೆ. ಜುಲೈ 20ರಂದು ಜಿಲ್ಲಾಧಿಕಾರಿಗಳ ತಂತ್ರಾಂಶದ ಮೂಲಕ ಬಿಡುಗಡೆ ಮಾಡಿರಿವುದಾಗಿ ಮಾಹಿತಿ ನೀಡಿದರು.
ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಬೆಳೆ ಕಟಾವು ಪ್ರಯೋಗ ಬಗ್ಗೆ ಪ್ರಾಯೋಗಿಕವಾಗಿ ವಿವರಣೆ ನೀಡಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುಧಾಕರ ಮಾನೆ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಸಹಾಯಕ ಸಾಂಖಿಕ ಅಧಿಕಾರಿ ಮಂಜುಳಾ ಚೌವ್ಹಾಣ್ ಇತರರಿದ್ದರು.