ನಿಯಮ ಸಡಿಲಿಸಿ ಗಣಿಗಾರಿಕೆಗೆ ಅನುಮತಿ

1-klr-4 Alternative
Published on

ಕೋಲಾರ: ತಾಲೂಕಿನ ದೊಡ್ಡ ಅಯ್ಯೂರು ಗ್ರಾಮದ ಅಂಜನಾದ್ರಿ ಬೆಟ್ಟದಲ್ಲಿ ನಿಯಮ ಉಲ್ಲಂಘಿಸಿ ಗಣಿಗಾರಿಕೆಗೆ ಅನುಮತಿ ನೀಡಿರುವುದು ಹಾಗೂ ಬೆಟ್ಟದ ಮಧ್ಯೆ ಅಕ್ರಮವಾಗಿ ರಸ್ತೆ ಮಾಡಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಸಂಸದ ಎಸ್. ಮುನಿಸ್ವಾಮಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮದಲ್ಲಿ ಗಣಿಗಾರಿಕೆಗೆ ನಡೆಯುತ್ತಿರುವ ದೂರಿನ ಹಿನ್ನೆಲೆಯಲ್ಲಿ ಭಾನುವಾರ ಸ್ಥಳಕ್ಕೆ ತೆರಳಿ ಗ್ರಾಮಸ್ಥರಿಂದ ಮಾಹಿತಿ ಪಡೆದರಲ್ಲದೆ ಗಣಿಗಾರಿಕೆಗೆ ಅನುಮತಿ ನೀಡಿರುವ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಂದ ದಾಖಲೆ ಪರಿಶೀಲಿಸಿದ ಸಂಸದ ಮುನಿಸ್ವಾಮಿ ಬೆಟ್ಟ-ಗುಡ್ಡ ಏರಿ ಸ್ಥಳ ಪರಿಶೀಲಿಸಿದರು.

ಅಂಜನಾದ್ರಿ ಬೆಟ್ಟ, ದೀಪದ ಗುಡ್ಡಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿ ಗಣೇಶ, ಮುತ್ತಪ್ಪರಾಯಸ್ವಾಮಿ (ದೀಪದ ಗುಡ್ಡ), ಆಂಜನೇಯಸ್ವಾಮಿ, ಈರಣ್ಣಸ್ವಾಮಿ, ಪಟಾಲಮ್ಮ, ಗಂಗಮ್ಮ, ಕಣಿವೆ ಆಂಜನೇಯಸ್ವಾಮಿ ಸೇರಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ 5ಕ್ಕೂ ಅಧಿಕ ದೇವಸ್ಥಾನಗಳಿವೆ. ಇಂತಹ ಪುರಾತನ ಬೆಟ್ಟದಲ್ಲಿ ಒಂದು ಕಡೆ 11.5 ಎಕರೆ ಹಾಗೂ ಇನ್ನೊಂದು ಕಡೆ 8 ಎಕರೆ ಸೇರಿ ಒಟ್ಟು 19.5 ಎಕರೆ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಬೆಟ್ಟದ ಮೇಲೆ 2017-18ರಲ್ಲಿ ಸರ್ಕಾರ ಗಣಿಗಾರಿಕೆಗೆ ಅನುಮತಿ ಕೊಟ್ಟಿದ್ದು ಇತ್ತೀಚೆಗೆ ಕೆಲಸ ಪ್ರಾರಂಭ ಮಾಡುವ ಸಂದರ್ಭದಲ್ಲಿ ಗಮನಕ್ಕೆ ಬಂದಿದೆ ಎಂದು ಗ್ರಾಮಸ್ಥರು ದೂರಿದರು.

ಸರ್ವೇ ನಂ 30ರ ಗುಡ್ಡಪುರ ಮತ್ತು ದೊಡ್ಡಯ್ಯೂರಿನ ಸ.ನಂ 76ರಲ್ಲಿ ಸುಮಾರು 2 ಕಿಮೀ ಉದ್ದಕ್ಕೆ ರಸ್ತೆ ನಿರ್ಮಿಸಿದ್ದು, ಕಂದಾಯ ಇಲಾಖೆಯಿಂದ ಎನ್‌ಒಸಿ ಪಡೆದಿಲ್ಲ. ಬೆಟ್ಟದ ಸುತ್ತಮುತ್ತ 13 ಕೆರೆಗಳಿವೆ, ನರಸಾಪುರದಿಂದ ಕೆಸಿ ವ್ಯಾಲಿ ನೀರು ದೊಡ್ಡ ಅಯ್ಯೂರು ಕೆರೆಗೆ ಬಂದು ನಂತರ ಇಲ್ಲಿಂದ ಇತರ ಕೆರೆಗಳಿಗೆ ಹರಿಯುತ್ತದೆ. ಉದ್ಯಮಿಗಳ ಹಣದ ಆಸೆಗೆ ಅಧಿಕಾರಿಗಳು ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ. ಈ ಕೂಡಲೆ ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಗೋಪಾಲಕೃಷ್ಣ ಒತ್ತಾಯಿಸಿದರು.

ದೇವಸ್ಥಾನ, ಕೆರೆ, ಜನವಸತಿ ಪ್ರದೇಶವಿದ್ದರೂ ಕೆಲ ಪಟ್ಟಭದ್ರ ಹಿತಾಸಕ್ತಿಗಳು, ಗಣಿ ಇಲಾಖೆಯ ಕೆಲ ಅಧಿಕಾರಿಗಳು ಶಾಮೀಲಾಗಿ ವರದಿಯನ್ನೇ ತಿದ್ದುಪಡಿ ಮಾಡಿರುವುದು ಮೋಲ್ನೋಟಕ್ಕೆ ಕಂಡು ಬಂದಿದೆ. ನಿಯಮ ಸಡಿಲಿಸಿ ದೇವಸ್ಥಾನದ ಹತ್ತು ಅಡಿ ಅಂತರದಲ್ಲಿ ಗಣಿಗಾರಿಕೆಗೆ ಸ್ಥಳ ಗುರುತಿಸಿರುವುದು ಕಂಡುಬಂದಿದೆ. ಸ್ಥಳ ಪರಿಶೀಲನೆ ಮಾಡದೆ ಗಣಿಗಾರಿಕೆಗೆ ಅನುಮತಿ ಕೊಟ್ಟಿರುವುದು ಸರಿಯಲ್ಲ ಎಂದು ಮುನಿಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಬೆಟ್ಟದ ಮಧ್ಯೆ ಅಕ್ರಮ ರಸ್ತೆ ಮಾಡಿದವರ ವಿರುದ್ಧ ಕ್ರಮ ಜರುಗಿಸಲು ಹೇಳಿದ್ದೇನೆ. ಸ್ಥಳೀಯರಿಗೆ, ದೇವಸ್ಥಾನಗಳಿಗೆ ಹಾನಿಯಾಗದ ಕಡೆ, ಪರವಾನಗಿ ಇದ್ದಲ್ಲಿ ಅಲ್ಲಿ ಕಲ್ಲು ಗಣಿಗಾರಿಕೆ ಮಾಡಲು ಅಭ್ಯಂತರವಿಲ್ಲ. ಆದರೆ, ಇಲ್ಲಿ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಡಿಸಿ ಮತ್ತು ಗಣಿ ಅಧಿಕಾರಿಗಳಿಗೆ ಸೂಚಿಸಿದರು. ಅರಾಭಿಕೊತ್ತನೂರು ಗ್ರಾಪಂ ಅಧ್ಯಕ್ಷ ರಾಜಣ್ಣ, ಸದಸ್ಯರಾದ ಚಿಕ್ಕಚನ್ನಪ್ಪ, ನಂಜುಂಡಗೌಡ ಸೋಮಶೇಖರ್, ನಾರಾಯಣಸ್ವಾಮಿ, ಗಣಿ ಇಲಾಖೆ ಅಧಿಕಾರಿ ಷಣ್ಮುಗಂ, ವಕ್ಕಲೇರಿ ಆರ್‌ಐ ಮಂಜುನಾಥ್, ವೃತ್ತ ನಿರೀಕ್ಷಕ ಆಂಜನಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net