ನಿಯಮ ಮೀರಿ ಬೆಳಕು ಮೀನುಗಾರಿಕೆ, ಆರೋಪ

22KWR6
Published on

ವಿಜಯವಾಣಿ ಸುದ್ದಿಜಾಲ ಕಾರವಾರ: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಆಳ ಸಮುದ್ರ ಮೀನುಗಾರಿಕೆ ನಿಷೇಧಿಸಲಾಗಿದೆ. ಆದರೆ, ಪಕ್ಕದ ಗೋವಾದಕ್ಕೆ ನಿಷೇಧ ಇಲ್ಲದೆ ಇರುವುದು ಸಮಸ್ಯೆಯಾಗಿದೆ.

ಗೋವಾ ರಾಜ್ಯದ ಟ್ರಾಲರ್ ಹಾಗೂ ಪರ್ಸೀನ್ ಮೀನುಗಾರಿಕೆ ಬೋಟ್​ಗಳು ಕಾರವಾರದಿಂದ ಭಟ್ಕಳದವರೆಗೆ ಮೀನುಗಾರಿಕೆ ನಡೆಸುತ್ತಿವೆ. ಮಾತ್ರವಲ್ಲ ಬೆಳಕು ಮೀನುಗಾರಿಕೆ ನಡೆಸುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲ ಗೋವಾದಿಂದಲೇ ಎಲ್ಲೆಡೆ ಮೀನು ಸಾಗಣೆ ನಡೆಯುತ್ತಿದೆ. ಸದ್ಯ ರಾಜ್ಯದಲ್ಲಿ ನಾಡದೋಣಿ ಮೀನುಗಾರುರಿಕೆಗೆ ಮಾತ್ರ ಅವಕಾಶವಿದ್ದು, ಇಲ್ಲಿನ ಮೀನುಗಾರರು ಗೋವಾದ ಮೀನುಗಾರರ ಅಕ್ರಮ ನೋಡಿಯೂ ನೋಡದಂತೆ ಸುಮ್ಮನಿರಬೇಕಾದ ಪರಿಸ್ಥಿತಿ ಇದೆ.

ಗೋವಾದಲ್ಲಿ ಸಿಕ್ಕಿ ಬಿದ್ದ ಉತ್ತರ ಕನ್ನಡದ ಮೀನುಗಾರರು: ಲಾಕ್​ಡೌನ್ ಸಮಯದಲ್ಲಿ ಗೋವಾ ರಾಜ್ಯಕ್ಕೆ ಇಲ್ಲಿನ ಮೀನುಗಾರರು ಬೋಟ್ ಮೂಲಕ ತೆರಳಿ ಸಿಕ್ಕಿ ಬಿದ್ದ ಘಟನೆ ಬೆಳಕಿಗೆ ಬಂದಿದೆ. ಕಟ್​ಬೋನಾ ಜಟ್ಟಿಯ ಸುಕ್ನೇಮ್ ಹಾಗೂ ಸುಕ್ನೇಮ್- 2 ಎಂಬ ಎರಡು ಬೋಟ್​ಗಳಲ್ಲಿ ಹೊನ್ನಾವರ ಹಳದೀಪುರದ ಮೂರು ಹಾಗೂ ಕಾರವಾರದ ನಚಿಕನ್​ಬಾಗದ ಇಬ್ಬರು ಏ.20 ರಂದು ತೆರಳಿದ್ದರು ಎನ್ನಲಾಗಿದೆ. ಇದರಿಂದ ಬೋಟ್ ಮಾಲೀಕರಿಗೆ 2.5 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಕಾರ್ವಿುಕರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.

ಬೆಳಕು ಮೀನುಗಾರಿಕೆಗೆ ನಿಷೇಧವಿದೆ. ಆದರೆ, ಗೋವಾ ರಾಜ್ಯದ ಬೋಟ್​ಗಳು ಕಾರವಾರ ತೀರದ ಅತಿ ಸಮೀಪ ಬಂದು ಬೆಳಕು ಮೀನುಗಾರಿಕೆ ನಡೆಸುತ್ತಿವೆ. ಆದರೂ ಅದರ ಮೇಲೆ ಯಾವುದೇ ಇಲಾಖೆಗಳು ಕ್ರಮ ವಹಿಸುತ್ತಿಲ್ಲ. ಕರ್ನಾಟಕಕ್ಕೊಂದು ನ್ಯಾಯ. ಗೋವಾಕ್ಕೊಂದು ನ್ಯಾಯ ಸರಿಯಲ್ಲ. | ವಿನಾಯಕ ಹರಿಕಂತ್ರ ಮೀನುಗಾರರ ಮುಖಂಡ

ಲೈಟ್ ಫಿಶಿಂಗ್ ನಡೆಸುತ್ತಿರುವ ಬಗ್ಗೆ ದೂರು ಬಂದಿದೆ. ಅಂಥ ಬೋಟ್​ಗಳನ್ನು ಹಿಡಿಯಲು ಕೋಸ್ಟ್​ಗಾರ್ಡ್​ಗೆ ಮನವಿ ಮಾಡಲಾಗಿದೆ. ಆದರೆ, ತೀರದಿಂದ ಸಾಕಷ್ಟು ಹೊರಗೆ ಮೀನುಗಾರಿಕೆ ನಡೆಸುತ್ತಿರುವ ಕಾರಣ ಅಲ್ಲಿಗೆ ತೆರಳಲು ಅವಕಾಶವಿಲ್ಲ ಎಂದು ಅವರೂ ಅಸಹಾಯಕತೆ ತೋರಿದ್ದಾರೆ. | ನಾಗರಾಜ್ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net