ನಿಯಮ ಪಾಲಿಸಿ ವಾಹನ ಚಾಲನೆ ಮಾಡಿ:ಪಿಎಸ್‌ಐ ಆಕಾಶ್ ಸಲಹೆ

ನಿಯಮ ಪಾಲಿಸಿ ವಾಹನ ಚಾಲನೆ ಮಾಡಿ:ಪಿಎಸ್‌ಐ ಆಕಾಶ್ ಸಲಹೆ
Published on

ಹಾಸನ: ತಮ್ಮ ಪ್ರಾಣ ಉಳಿಸಿಕೊಳ್ಳುವುದರ ಜತೆಗೆ ಮತ್ತೊಬ್ಬರ ಜೀವ ಉಳಿಸಲು ಕಾನೂನು ನಿಯಮ ಪಾಲಿಸಬೇಕೆಂದು ಸಂಚಾರಿ ಪಿಎಸ್‌ಐ ಆಕಾಶ್ ಸಲಹೆ ನೀಡಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ರೋಟರಿ ಕ್ಲಬ್ ಆಫ್ ಕ್ವಾಂಟಾ ಇವರ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂಚಾರಿ ನಿಯಮಗಳ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಪಘಾತದಲ್ಲಿ ಮರಣ ಹೊಂದಿದಾಗ ಹೆಲ್ಮೆಟ್ ಹಾಕಿದ್ದರೆ, ಸೀಟ್ ಬೆಲ್ಟ್ ಧರಿಸಿದ್ದರೆ ಬದುಕುತ್ತಿದ್ದ ಎಂದು ಜನರು ಮಾತನಾಡಿಕೊಳ್ಳುತ್ತಾರೆ. ಹೀಗಾಗಿ ವಾಹನ ಚಾಲನೆ ಮಾಡುವಾಗ ಪ್ರತಿಯೊಬ್ಬರು ಸಂಚಾರಿ ನಿಯಮ ಪಾಲಿಸಬೇಕು. ಅಪಘಾತಗಳ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ ಎಂದರು.

ಹೆಲ್ಮೆಟ್ ಧರಿಸದೆ ಬೈಕ್ ಓಡಿಸುವಾಗ ಅಪಘಾತವಾಗಿ ಪ್ರಾಣ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಪೋಷಕರು ಕೂಡ ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕು. ಅಪ್ರಾಪ್ತರು ವಾಹನ ಚಾಲನೆ ಮಾಡುವಂತಿಲ್ಲ. ವಾಹನ ಚಾಲನೆಗೂ ಮೊದಲು ಕಾನೂನುಗಳನ್ನು ತಿಳಿದುಕೊಳ್ಳುವುದು ಸೂಕ್ತ. ಯಾವುದೇ ಕಾರಣಕ್ಕೂ ವಾಹನದ ದಾಖಲೆ ಮತ್ತು ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಹಾಕದೇ ವಾಹನ ಚಾಲನೆ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ, ಜಗತ್ತಿನಲ್ಲಿ ಇರುವ ವಿವಿಧ ಮಾರಕ ಕಾಯಿಲೆಗಳಿಂದ ಸಾವನ್ನಪ್ಪುವವರ ಸಂಖ್ಯೆಗಿಂತ ರಸ್ತೆ ಅಫಘಾತದಲ್ಲಿ ಸಾವನ್ನಪ್ಪುವವರೆ ಹೆಚ್ಚಾಗಿರುವುದು ವಿಪರ್ಯಾಸವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರೋಟರಿ ಸಂಸ್ಥೆ ಅನೇಕ ವರ್ಷಗಳಿಂದ ಸಾಮಾಜಿಕ ಕಳಕಳಿಯಿಂದ ಜನಪರ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ವಿಶ್ವದೆಲ್ಲೆಡೆ ಕಾರ್ಯ ನಿರ್ವಹಿಸುತ್ತಿರುವ ರೋಟರಿ 14 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಆ ಮೂಲಕ ಹಲವು ಸಮಾಜ ಸೇವೆಯನ್ನು ನಿರ್ವಹಿಸಿಕೊಂಡು ಬಂದಿದೆ. ರಸ್ತೆ ಅಪಘಾತಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ, ಪ್ರಾಣ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಮುಂದಾಗಿರುವುದು ಶ್ಲಾಘನೀಯ ಎಂದರು.

ಇದೇ ವೇಳೆ ರೋಟರಿ ಜಿಲ್ಲೆ 3182 ಅಸಿಸ್ಟೆಂಟ್ ಗೌರ‌್ನರ್ ಡಾ. ಸೌಮ್ಯಾಮಣಿ, ವಲಯ ಸೇನಾನಿ ಕೆ.ಎಲ್. ರಮೇಶ್, ಪಿಎಸ್‌ಐ ಮೋಹನ್ ಕುಮಾರ್, ರೋಟರಿ ಕ್ಲಬ್ ಆಫ್ ಕ್ವಾಂಟಾ ಹಾಸನ ಅಧ್ಯಕ್ಷ ಬೊಮ್ಮೇಗೌಡ, ಕಾರ್ಯದರ್ಶಿ ಎಂ.ಡಿ. ನಾಗೇಶ್ ಹಾಗೂ ರೋಟರಿಯನ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net