

ಲಕ್ಷ್ಮೇಶ್ವರ: ಗದಗ ಎಸ್ಪಿ ಯತೀಶ ಎನ್. ಅವರು ಸೋಮವಾರ ಪಟ್ಟಣದ ಪೊಲೀಸ್ ಠಾಣೆ, ಎಪಿಎಂಸಿಗೆ ಭೇಟಿ ನೀಡಿ ಲಾಕ್ ಡೌನ್ ಪರಿಸ್ಥಿತಿಯ ಮಾಹಿತಿ ಪಡೆದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜೀವನಾವಶ್ಯಕ ವಸ್ತುಗಳ ಪೂರೈಕೆ ಮತ್ತು ರೈತರ ಕೃಷಿ ಚಟುವಟಿಕೆ, ಆರೋಗ್ಯ ಸೇವೆಗೆ ಅವಕಾಶ ಕಲ್ಪಿಸಿಕೊಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿಗಾವಹಿಸಲಾಗಿದೆ. ಜನರ ಆರೋಗ್ಯದ ಜತೆಗೆ ಪೊಲೀಸ್ ಸಿಬ್ಬಂದಿಯ ಆರೋಗ್ಯದ ಬಗ್ಗೆ ಗಮನಹರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಅನವಶ್ಯಕವಾಗಿ ತಿರುಗಾಡುವುದನ್ನು ಕೈಬಿಡಿ, ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಪೊಲೀಸರ ಕಾರ್ಯಕ್ಕೆ ಸಹಕರಿಸಬೇಕು’ ಎಂದು ಮನವಿ ಮಾಡಿದರು. ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ಎಪಿಎಂಸಿಗೆ ಭೇಟಿ ನೀಡಿ ಅಲ್ಲಿನ ಸ್ಟೇಟ್ ಬ್ಯಾಂಕ್ ಆವರಣದಲ್ಲಿ ಗ್ರಾಹಕರು ಮಾಸ್ಕ್ ಹಾಕಿಕೊಳ್ಳದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪುಗೂಡಿ ನಿಂತಿರುವುದನ್ನು ಗಮನಿಸಿದ ಅವರು ಸ್ವತಃ ಲಾಠಿ ಹಿಡಿದು ಜನರಿಗೆ ಬುದ್ಧಿ ಹೇಳಿದರು. ಈ ವೇಳೆ ಬ್ಯಾಂಕಿನ ಮ್ಯಾನೇಜರ್ಗೆ ಇಲ್ಲಿನ ವ್ಯವಸ್ಥೆ ಸರಿಪಡಿಸುವಂತೆ ಸೂಚಿಸಿದರು.
ಬಳಿಕ ಎಪಿಎಂಸಿಗೆ ಪ್ರವೇಶಿಸಿದ ಎಸ್ಪಿ ಯತೀಶ, ಕರೊನಾ ತಡೆಗೆ ಕೈಗೊಂಡ ಕ್ರಮಗಳ ಕುರಿತು ಕಾರ್ಯದರ್ಶಿ ಎನ್.ಎ. ಲಕ್ಕುಂಡಿ ಅವರಿಂದ ಮಾಹಿತಿ ಪಡೆದರು. ಪ್ರತಿಕ್ರಿಯಿಸಿದ ಕಾರ್ಯದರ್ಶಿ, ‘ರೈತರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮತ್ತು ಉತ್ಪನ್ನ ತರುವ ವಾಹನದಲ್ಲಿ ಬಂದು ಅದರಲ್ಲಿಯೇ ಹೋಗುವಂತೆ ಸೂಚಿಸಲಾಗಿದೆ. ಎಲ್ಲ ವ್ಯಾಪಾರಸ್ಥರ ಅಂಗಡಿಗಳಲ್ಲಿ ನೀರು, ಸ್ಯಾನಿಟೈಸರ್ ಇರಿಸಲಾಗಿದೆ ಮತ್ತು ಹೋಟೆಲ್, ಖಾನಾವಳಿ ಬಂದ್ ಇರುವುದರಿಂದ ಎಪಿಎಂಸಿ ವರ್ತಕರ ಸಂಘದವರೇ ಉಚಿತವಾಗಿ, ವ್ಯವಸ್ಥಿತವಾಗಿ ಊಟದ ವ್ಯವಸ್ಥೆ ಮಾಡಿದ್ದಾರೆ’ ಎಂದರು.
ಸಿಪಿಐ ಆರ್.ಎಚ್. ಕಟ್ಟಿಮನಿ, ಪಿಎಸ್ಐ ಶಿವಯೋಗಿ ಲೋಹಾರ, ಅಪರಾಧ ವಿಭಾಗದ ಪಿಎಸ್ಐ ಪಿ.ಎಂ. ಬಡಿಗೇರ, ಪೊ›ಬೆಷನರಿ ಪಿಎಸ್ಐ ಎಸ್.ಎಂ. ಕಾರಜೋಳ, ಎಎಸ್ಐ ಶಂಕರ ಬೆಟಗೇರಿ, ಎಪಿಎಂಸಿ ಅಧ್ಯಕ್ಷ ಜೆ.ಆರ್. ಕೊಪ್ಪದ, ವರ್ತಕರ ಸಂಘದ ಕಾರ್ಯದರ್ಶಿ ಎಸ್.ಕೆ. ಕಾಳಪ್ಪನವರ, ಇತರರಿದ್ದರು.