ನಿಯಮ ಪಾಲಿಸದಿದ್ದರೆ ಕ್ರಮ

27 vikram 5
Published on

ಧಾರವಾಡ: ರಾಜ್ಯದಲ್ಲಿ ಹೆಚ್ಚುತ್ತಿರುವ ಕರೊನಾ ಹಾವಳಿ ತಡೆಗಟ್ಟಲು ರಾಜ್ಯ ಸರ್ಕಾರ ಏ. 27ರಿಂದ ಮೇ 10 ರವರೆಗೆ ವಿಧಿಸಿದ ಜನತಾ ಕರ್ಫ್ಯೂ ಮಾರ್ಗಸೂಚಿ ಅನ್ವಯ ಜಿಲ್ಲೆಯಲ್ಲಿ ಯಥಾವತ್ತಾಗಿ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ವರ್ಚುವಲ್ ಸಭೆ ನಡೆಸಿ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಬೆಡ್ ಕೊರತೆ ಇಲ್ಲ. ಜಿಲ್ಲಾಸ್ಪತ್ರೆ ಆವರಣದಲ್ಲಿನ ತಾಯಿ ಮಕ್ಕಳ ಆಸ್ಪತ್ರೆ ಕಟ್ಟಡದಲ್ಲಿ 125 ಹಾಗೂ ಕಿಮ್್ಸ ಆವರಣದ ತಾಯಿ ಮಕ್ಕಳ ಆಸ್ಪತ್ರೆ 100 ಹಾಗೂ ಕಿಮ್್ಸ ಕಟ್ಟಡದಲ್ಲಿ 175 ಬೆಡ್​ಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈವರೆಗೆ ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆಯನ್ನು 2,25,278 ಜನರಿಗೆ ಹಾಗೂ 13,680 ಜನರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ ಎಂದರು.

ಜನತಾ ಕರ್ಫ್ಯೂ ಅವಧಿಯಲ್ಲಿ ಹೋಟೆಲ್, ರೆಸ್ಟೋರೆಂಟ್ ತೆರೆದು ಪಾರ್ಸಲ್ ನೀಡಲು ಮಾತ್ರ ಅನುಮತಿ ನೀಡಲಾಗಿದೆ. ಹೋಂ ಡೆಲಿವರಿಗೆ ಹೆಚ್ಚಿನ ಆದ್ಯತೆ ನೀಡಬೇಕಲ್ಲದೆ, ಆಹಾರ ಒಯ್ಯುವವರು ಕೋವಿಡ್ ನಿಯಮಗಳನ್ನು ಪಾಲಿಸಲೇಬೇಕು. ರಾಜ್ಯ ಸರ್ಕಾರದ ಮಾರ್ಗಸೂಚಿ ಹೊರತುಪಡಿಸಿ ಹೆಚ್ಚಿನ ನಿಯಮಗಳನ್ನು ಜಿಲ್ಲಾಡಳಿತ ಅಳವಡಿಸಿಲ್ಲ ಎಂದರು.

ತುರ್ತು ವಾಹನಗಳಿಗೆ ಅವಶ್ಯಕ ದಾಖಲೆ ನೋಡಿ ಗಮನಿಸಿ ಪರವಾನಗಿ ನೀಡಲಾಗುವುದು. ರೈಲ್ವೆ, ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಟಿಕೆಟ್​ಗಳೇ ಪಾಸ್​ಗಳಿದ್ದಂತೆ. ಕಟ್ಟಡ ಕಾಮಗಾರಿ, ಕೈಗಾರಿಕೆಗಳು ಸಂಬಂಧಪಟ್ಟ ಇಲಾಖೆ ಅನುಮತಿ ಪಡೆದು ಕಾರ್ಯ ನಿರ್ವಹಿಸಬಹುದು ಎಂದರು.

ಧಾರವಾಡದ ಟಾಟಾ ಹಿಟಾಚಿ ಕಂಪನಿಯಿಂದ 10 ಲಕ್ಷ ರೂ. ಸಿಎಸ್​ಆರ್ ನಿಧಿಯಲ್ಲಿ 100 ಹಾಸಿಗೆ (ಬೆಡ್)ಗಳನ್ನು, ಹಾಗೂ ದೇಶಪಾಂಡೆ ಫೌಂಡೇಷನ್ 25 ಲಕ್ಷ ರೂ.ಗಳ ಸಿಎಸ್​ಆರ್ ನಿಧಿಯಲ್ಲಿ ಅಗತ್ಯವಿರುವ ಹಾಸಿಗೆಗಳನ್ನು ನೀಡಲು ಮುಂದಾಗಿದ್ದಾರೆ. ಆ ಹಾಸಿಗೆಗಳನ್ನು ಕಿಮ್್ಸ ಹಾಗೂ ಜಿಲ್ಲಾಸ್ಪತ್ರೆಗೆ ನೀಡುವುದಾಗಿ ತಿಳಿದರು.

ಪೊಲೀಸ್ ಆಯುಕ್ತ ಲಾಭೂರಾಮ್ ಮಾತನಾಡಿ, ಅನಗತ್ಯ ಸಂಚಾರ ನಿರ್ಬಂಧಿಸಲಾಗಿದೆ. ಪೊಲೀಸ್ ಸಿಬ್ಬಂದಿ ಅಗತ್ಯ ಕ್ರಮ ಕೈಗೊಂಡು ನಿಗದಿತ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ್ದಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಮತ್ತು ಅನಗತ್ಯ ಓಡಾಟ, ಸಂಚಾರ ಮಾಡುವವರ ಮೇಲೆ ಸೂಕ್ತ ಕ್ರಮ ಕೈಗೊಂಡು ವಾಹನಗಳನ್ನು ಸೀಜ್ ಮಾಡಲಾಗುವುದು. ನಗರದ ವಿವಿಧ ಕಡೆಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲು ಸಹ ಚಿಂತಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಮಾತನಾಡಿ, ಜಿಲ್ಲೆಯ ಗಡಿಭಾಗಗಳಲ್ಲಿ ಸದ್ಯಕ್ಕೆ ಯಾವುದೇ ಚೆಕ್ ಪೋಸ್ಟ್ ಇಲ್ಲ. ಅಗತ್ಯ ಸೇವೆ ನೀಡುವ ಹಾಗೂ ಸರಕು ವಾಹನಗಳಿಗೆ ಪರವಾನಗಿ ನೀಡಿದ್ದು, ಉಳಿದ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇನ್ನು ಈ ಸಮಯದಲ್ಲಿ ಅಗತ್ಯ ವಸ್ತುಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಥವಾ ಕೃತಕ ಅಭಾವ ಸೃಷ್ಟಿಸಿದರೆ ಅಂತಹವರ ವಿರುದ್ಧ ಜಂಟಿ ಕಾರ್ಯಾಚಾರಣೆ ನಡೆಸಿ ಪ್ರಕರಣ ದಾಖಲಿಸಲಾಗುವುದು. ಇಂತಹ ಪ್ರಕರಣಗಳು ಕುರಿತು ಜನರು ನೇರವಾಗಿ ದೂರು ಸಹ ನೀಡಬಹುದು ಎಂದರು.

ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಇತರರು ಪಾಲ್ಗೊಂಡಿದ್ದರು.

ಪಾಸ್ ವಿತರಿಸಲ್ಲ

ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಯಿಂದ ಜಿಲ್ಲೆಯಲ್ಲಿ ಯಾವುದೇ ರೀತಿಯ ಪಾಸ್​ಗಳನ್ನು ವಿತರಿಸುವುದಿಲ್ಲ. ಕಟ್ಟಡ, ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕಾರ್ವಿುಕರು ತಮ್ಮ ಸಂಸ್ಥೆಯ ಅಧಿಕೃತ ಪಾಸ್ ಅಥವಾ ಗುರುತಿನ ಪತ್ರ ಧರಿಸಿರಬೇಕು. ಸಂಚರಿಸುವವರನ್ನು ಅಧಿಕಾರಿಗಳು ತಪಾಸಣೆ ನಡೆಸಿದಾಗ ಸೂಕ್ತ ದಾಖಲೆ ಹಾಗೂ ಸಮಂಜಸ ಉತ್ತರ ನೀಡಿ ಅನುಮತಿ ಪಡೆಯಬೇಕು. ಸರ್ಕಾರ ನೀಡಿರುವ ನಿರ್ದೇಶನ ಹಾಗೂ ಮಾರ್ಗಸೂಚಿ ಆಧಾರದ ಮೇಲೆ ಮಹಾನಗರ ವ್ಯಾಪ್ತಿಯಲ್ಲಿ ಅನಗತ್ಯ ಸಂಚಾರ, ವ್ಯಾಪಾರ ವಹಿವಾಟು ಬಂದ್ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜನರೊಂದಿಗೆ ಸಭೆ

ಸಾರ್ವಜನಿಕರೊಂದಿಗೆ ಸಹ ವರ್ಚುವಲ್ ಸಭೆ ನಡೆಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಲಾಭೂರಾಮ, ಎಸ್ಪಿ ಕೃಷ್ಣಕಾಂತ ಹಾಗೂ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಕರ್ಫ್ಯೂ ಜಾರಿ ಅವಧಿಯಲ್ಲಿ ಅನುಮತಿಸಲಾಗುವ ಮತ್ತು ನಿರ್ಬಂಧಿಸಿರುವ ಕಾರ್ಯಚಟುವಟಿಕೆಗಳ ಕುರಿತು ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net