ನಿಯಮ ಉಲ್ಲಂಘಿಸಿದರೆ ಕ್ರಮ

21Huk1-Web
ಹುಕ್ಕೇರಿಯಲ್ಲಿ ಬುಧವಾರ ಜರುಗಿದ ಸಭೆಯಲ್ಲಿ ತಹಸೀಲ್ದಾರ್ ಡಾ.ಡಿ.ಎಚ್.ಹೂಗಾರ ಮಾತನಾಡಿದರು. ಸಿಪಿಐ ರಮೇಶ ಛಾಯಾಗೋಳ, ಪಿಎಸ್‌ಐ ಸಿದ್ರಾಮಪ್ಪ ಉನ್ನದ, ಮಹಾಂತೇಶ ಸಜ್ಜನ, ಉಮೇಶ ಸಿದ್ನಾಳ ಮತ್ತಿತರರಿದ್ದರು.
Published on

ಹುಕ್ಕೇರಿ: ಜನರ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ತಾಲೂಕಾಡಳಿತದ ಜತೆಗೆ ಜನರ ಸಹಕಾರ ಅವಶ್ಯ ಎಂದು ತಹಸೀಲ್ದಾರ್ ಡಾ.ಡಿ.ಎಚ್.ಹೂಗಾರ ತಿಳಿಸಿದರು.

ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಕೋವಿಡ್ 2ನೇ ಅಲೆ ನಿಯಂತ್ರಣಕ್ಕಾಗಿ ತಾಲೂಕಾಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮಾಸ್ಕ್ ಧರಿಸಿ, ದೈಹಿಕ ಅಂತರ ಪಾಲಿಸಬೇಕು. ಅನಗತ್ಯವಾಗಿ ತಿರುಗಾಡದೆ ಸಮೀಪದ ಅಂಗಡಿಗಳಿಂದಲೇ ಜೀವನಾವಶ್ಯಕ ವಸ್ತುಗಳ ಖರೀದಿ ಮಾಡಬೇಕು ಎಂದರು.

ನಿಯಮಾವಳಿ ಉಲ್ಲಂಘಿಸಿದವರ ಮೇಲೆ ಪ್ರಕರಣ ದಾಖಲಿಸುವುದು ನಿಶ್ಚಿತ. ಮಠ, ಮಸೀದಿ, ದೇವಸ್ಥಾನ ಮತ್ತು ಚರ್ಚ್ ಸೇರಿ ಯಾವುದೇ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರಿಗೆ ಪೂಜೆ, ಪ್ರಾರ್ಥನೆಗಳಿಗೆ ಅವಕಾಶ ಕಲ್ಪಿಸಬಾರದು. ಸಂಬಂಧಿಸಿದವರು ಮಾತ್ರ ಪೂಜೆ ಪುನಸ್ಕಾರ ನೆರವೇರಿಸಬೇಕು.ಒಂದು ವೇಳೆ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಿತರ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸರ್ಕಾರಿ ಕಾರ್ಯಾಲಯಗಳಿಗೆ ಬರುವವರು ನಿಗದಿತ ಅವಧಿ ಹೊರತುಪಡಿಸಿ ಇರುವಂತಿಲ್ಲ. ಅದರಲ್ಲೂ ಉಪ ನೋಂದಣಿ ಅಧಿಕಾರಿಗಳು, ಸಿಡಿಪಿಒ ಮತ್ತು ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಜನ ಹೆಚ್ಚಾಗಿ ಬರುವುದರಿಂದ ಅವರಿಗೆ ಸರದಿ ಅವಕಾಶ ನೀಡಿ ಆದಷ್ಟು ಬೇಗ ಅವರ ಕೆಲಸ ಮುಗಿಸಿ ಕಳುಹಿಸುವಂತೆ ಸೂಚಿಸಿದರು. ತಾಪಂ ಇಒ ಬಿ.ಕೆ.ಲಾಳಿ ಮಾತನಾಡಿ, ಗ್ರಾಮಗಳಲ್ಲಿ ನಿಯಮ ಉಲ್ಲಂಘನೆಯಾದರೆ ಗ್ರಾಮಗಳ ಉಸ್ತುವಾರಿಗೆ ನಿಯೋಜಿತ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಕರ್ಪ್ಯೂ ಘೋಷಿಸಲಾಗಿದ್ದು, ಆ ವೇಳೆಯಲ್ಲಿ ಜನ ಮನೆ ಬಿಟ್ಟು ಹೊರಗೆ ಬರುವಂತಿಲ್ಲ. ತುರ್ತು ಸೇವೆ, ಅಗತ್ಯ ಕೆಲಸ ಹೊರತುಪಡಿಸಿ ಉಳಿದವುಗಳಿಗೆ ನಿಷೇಧವಿದೆ ಎಂದರು.

ರಮೇಶ ಛಾಯಾಗೋಳ, ಸಿದ್ರಾಮಪ್ಪ ಉನ್ನದ, ಮೋಹನ ಜಾಧವ, ಉಮೇಶ ಸಿದ್ನಾಳ, ವಿ.ಆರ್.ನಾಗನೂರ, ಮಹಾಂತೇಶ ಸಜ್ಜನ, ಶ್ರೀಶೈಲ ಹಿರೇಮಠ, ಡಾ.ಉದಯ ಕುಡಚಿ, ಮಂಜುನಾಥ ಪರಸನ್ನವರ, ಎಸ್.ಎ.ಭೂಸಗೋಳ, ಹಿರೇಮಠ, ಟಿ.ಎಚ್.ದೇಸಾಯಿ, ಹರಿಯಪ್ಪ ಒ. ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net