ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ

23KWR1
Published on

ಕಾರವಾರ: ಕರೊನಾ ತಡೆಗೆ ಜಿಲ್ಲೆಯ ಜನರು ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಮನವಿ ಮಾಡಿದ್ದಾರೆ. ಸೋಂಕು ತಡೆಯಲು ಜಿಲ್ಲಾಡಳಿತ ಎಲ್ಲ ಕ್ರಮ ಕೈಗೊಂಡಿದೆ. ಜಿಲ್ಲೆಯ ಯಾವುದೇ ವ್ಯಕ್ತಿಗೆ ಇದುವರೆಗೂ ಸೋಂಕು ಇರುವುದು ಕಂಡುಬಂದಿಲ್ಲ. ಆದರೂ ಎಚ್ಚರಿಕೆ ಅತ್ಯಗತ್ಯ. ಜನರ ಸಹಕಾರದಿಂದ ಮಾತ್ರ ಇದೆಲ್ಲ ಸಾಧ್ಯ ಎಂದರು.

ಜನರು ಮನೆಯಲ್ಲಿದ್ದು, ಮೂಲ ವಸ್ತುಗಳಿಗೆ ಯಾವುದೇ ಅವ್ಯವಸ್ಥೆಯಾಗದಂತೆ ತಡೆಯುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ. ಇದರಿಂದ ಜನ ಆತಂಕಪಟ್ಟು ಹೆಚ್ಚಿನ ಆಹಾರ ಧಾನ್ಯ ಅಥವಾ ಯಾವುದೇ ಮೂಲ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆ ಇಲ್ಲ.

ಹೆಚ್ಚಿನ ಜನ ಸೇರುವ ಸಂತೆಯಂಥ ವ್ಯವಸ್ಥೆ ಬಿಟ್ಟು, ಮನೆ, ಮನೆಗೇ ಪೂರೈಸುವ ವ್ಯವಸ್ಥೆ ಮಾಡಲಾಗುವುದು ಎಂದರು. ನಮ್ಮ ಕೋರಿಕೆಯನ್ನೂ ಬಿಟ್ಟು ಅನಗತ್ಯವಾಗಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಅನಿವಾರ್ಯವಾಗಲಿದೆ. ಸೇರಿದ ಜನರ ಮೇಲೆ ನಾನು ಪ್ರಕರಣ ದಾಖಲಿಸುವುದಿಲ್ಲ. ಜನ ಸೇರಲು ಕಾರಣನಾದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು. ಎಸ್​ಪಿ ಶಿವ ಪ್ರಕಾಶ ದೇವರಾಜು ಇದ್ದರು.

24 ಜನರ ರಕ್ತದ ಮಾದರಿ ಪರಿಶೀಲನೆ: ಜಿಲ್ಲೆಯಲ್ಲಿ ಇದುವರೆಗೆ 24 ಜನರ ರಕ್ತದ ಮಾದರಿ ಪರಿಶೀಲನೆಗೆ ಕಳಿಸಿಕೊಡಲಾಗಿದೆ. ಅದರಲ್ಲಿ ಇನ್ನೂ 9 ಜನರ ವರದಿ ಬರುವುದು ಬಾಕಿ ಇದೆ. ಇನ್ನು 15 ಜನರಲ್ಲಿ ಯಾವುದೇ ರೋಗದ ಲಕ್ಷಣ ಇಲ್ಲ ಎಂಬುದು ಖಚಿತವಾಗಿದೆ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.

ಮುಂಡಗೋಡದಲ್ಲೂ ಸೆಕ್ಷನ್ 144: ಕರೊನಾ ವೈರಸ್ ತಡೆಯಲು ಮುಂಡಗೋಡ ತಾಲೂಕಿನಲ್ಲೂ ಸೆಕ್ಷನ್ 144 ಜಾರಿ ಮಾಡಿ ತಹಸೀಲ್ದಾರ್ ಶ್ರೀಧರ ಮುಂದಲಮನಿ ಆದೇಶ ಹೊರಡಿಸಿದ್ದಾರೆ.

ಭಟ್ಕಳದಲ್ಲಿ ವಿಶೇಷ ಕಾಳಜಿ: ಮಾ.24ರ ಬೆಳಗ್ಗೆ 6 ಗಂಟೆಯಿಂದ ಮಾ. 30ರ ರಾತ್ರಿ 12ರವರೆಗೆ ಭಟ್ಕಳ ಉಪವಿಭಾಗಕ್ಕೆ ಸೇರಿದ ಭಟ್ಕಳ ಹಾಗೂ ಹೊನ್ನಾವರ ತಾಲೂಕುಗಳಲ್ಲಿ ವಿಶೇಷ ಕಾಳಜಿ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ.ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ವಿದೇಶದಿಂದ ಮರಳಿದ ಒಟ್ಟು ಜನಸಂಖ್ಯೆಯ ಶೇ. 40ರಷ್ಟು ಭಟ್ಕಳದಲ್ಲೇ ಇದೆ. ಅವರ ಬಗ್ಗೆ ಇತರರಲ್ಲಿ ಆತಂಕ ಇರುವುದರಿಂದ ಭಟ್ಕಳದಲ್ಲಿ ವಿಶೇಷ ನಿಗಾ ವಹಿಸಿ ಈ ಆದೇಶ ಹೊರಡಿಸಲಾಗಿದೆ ಎಂದರು.

10 ದಿನದಲ್ಲಿ 1500 ಹಾಸಿಗೆ ವ್ಯವಸ್ಥೆ: ಕರೊನಾ ಸೋಂಕು ಹರಡಿ ಗಂಭೀರ ಪರಿಸ್ಥಿತಿ ಉಂಟಾದಲ್ಲಿ ಎದುರಿಸಲು ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ನಡೆಸಿದೆ ಎಂದು ಜಿಪಂ ಸಿಇಒ ಎಂ.ರೋಶನ್ ತಿಳಿಸಿದ್ದಾರೆ. ಕ್ರಿಮ್್ಸ ಆಸ್ಪತ್ರೆಯಲ್ಲಿ 800 ಹಾಸಿಗೆಗಳಿಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲಿ 100 ಪಲ್ಸ್ ಆಕ್ಸಿ ಮೀಟರ್ ಪೂರೈಸಲಾಗುವುದು. ಹೊರಗಡೆಯೇ ಒಂದು ಜ್ವರದ ವಾರ್ಡ್ ತೆರೆಯಲು ನಿರ್ಧರಿಸಲಾಗಿದೆ. ಅಲ್ಲಿ ಪ್ರಾಥಮಿಕ ಪ್ರಯೋಗಾಯಲಯ ವ್ಯವಸ್ಥೆ ಇರಲಿದೆ. ಸೋಂಕಿನ ಶಂಕೆ ಕಂಡುಬಂದಲ್ಲಿ ಐಸೋಲೇಷನ್ ವಾರ್ಡ್ ವ್ಯವಸ್ಥೆ ಮಾಡಲಾಗುತ್ತಿದ್ದು, ಅಲ್ಲಿ 300 ಹಾಸಿಗೆಗಳನ್ನು ಇರಿಸಲಾಗುತ್ತಿದೆ. ಅದರಲ್ಲಿ ಐಸಿಯು ವ್ಯವಸ್ಥೆ ಮಾಡಲಿದ್ದೇವೆ. ಸೋಂಕಿತರಿಗೆ ಕೊಡಬೇಕಾದ ಎಂಟಿ ವೈರಲ್ ಕಂಟ್ರೋಲ್ ಡ್ರಗ್ ಹಾಗೂ ಆರ್ಬಿಡಾಲ್ ಔಷಧ ನಮ್ಮ ಬಳಿ ಸಾಕಷ್ಟು ಲಭ್ಯವಿದೆ. ಅಲ್ಲದೆ, ಜಿಲ್ಲೆಯ ಪ್ರತಿ ತಾಲೂಕು ಮಟ್ಟದಲ್ಲಿ , ತಾಲೂಕು ಆಸ್ಪತ್ರೆ ಜತೆಗೆ ಹಾಸ್ಟೆಲ್​ಗಳನ್ನು ಗುರುತಿಸಿ ಐಸೋಲೇಷನ್ ವಾರ್ಡ್ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ 14 ವೆಂಟಿಲೇಷನ್(ತುರ್ತ ನಿಗಾ ಘಟಕ) ಸೌಲಭ್ಯವಿದ್ದು, ಇನ್ನೂ 14 ಯಂತ್ರಗಳನ್ನು ಪೂರೈಸಲು ಸೂಚಿಸಲಾಗಿದೆ. ಎಲ್ಲ ವೈದ್ಯರನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ತಂತ್ರಜ್ಞರ ಒಂದು ತಂಡಕ್ಕೆ ಕರೊನಾ ತಡೆಯ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನನಗೆ ಸೋಂಕು ಬರಬಾರದು ಹಾಗೂ ನಾನು ಸೋಂಕನ್ನು ಬೇರೆಯವರಿಗೆ ಹರಡುವುದಿಲ್ಲ ಎಂಬ ಸಂಕಲ್ಪವನ್ನು ಮಾಡಿ ಜನ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು. | ಡಾ.ಹರೀಶ ಕುಮಾರ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net