ನಿಯಮ ಉಲ್ಲಂಘಿಸಿದ ಚಾಲಕರಿಂದ ದಂಡ ವಸೂಲಿ

14blrp6
Published on

ಬೇಲೂರು: ಸಾರ್ವಜನಿಕರ ಹಣಕ್ಕಿಂತ ಜೀವ ಮುಖ್ಯವಾಗಿರುವುದರಿಂದ ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ದಂಡ ವಸೂಲಿ ಮಾಡುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದರು.


ಬೇಲೂರು ತಾಲೂಕಿನ ಹಳೇಬೀಡು ವೃತ್ತದ ಅರೇಹಳ್ಳಿ ಪೊಲೀಸ್ ಠಾಣೆಗೆ ಶುಕ್ರವಾರ ಭೇಟಿ ನೀಡಿ ಬೈಕ್ ಸವಾರರಿಗೆ ದಂಡ ವಿಧಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ಹೊಸದೇನಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದ ಬಹುತೇಕ ಸವಾರರು ಸಾವಿಗೀಡಾಗುತ್ತಿದ್ದಾರೆ. ಅಪಘಾತಗಳಲ್ಲಿ ವ್ಯಕ್ತಿ ಸಾವಿಗೀಡಾದರೆ ಅವರನ್ನೇ ನಂಬಿರುವ ಕುಟುಂಬ ಬೀದಿಗೆ ಬೀಳುತ್ತದೆ. ಇಂತಹ ಘಟನೆಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಆದ್ದರಿಂದ ಇಂತಹ ಆಚಾತುರ್ಯಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಚಾಲಕರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸುತ್ತಿದ್ದೇವೆ. ಜತೆಗೆ ಎಲ್ಲ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಮುಂದಿನ ದಿನಗಳಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಅರಸೀಕೆರೆ ಡಿವೈಎಸ್ಪಿ ಲೋಕೇಶ್, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್, ಬೇಲೂರು ಪೊಲೀಸ್ ಇನ್ಸ್‌ಪೆಕ್ಟರ್ ರವಿಕಿರಣ್, ಅರೇಹಳ್ಳಿ ಪಿಎಸ್‌ಐ ಲಿಂಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net