ನಿಯಂತ್ರಣದತ್ತ ಪಿಪಿಆರ್​ ವೈರಸ್​ : ಪಶು ಇಲಾಖೆಯಿಂದ ಲಸಿಕೆ ಅಭಿಯಾನ, ವಿಶೇಷ ಜಾಗೃತಿ : 4,07,265 ಕುರಿಗಳಿಗೆ ವ್ಯಾಕ್ಸಿನ್​

Published on
ಪಶು ಇಲಾಖೆ ವತಿಯಿಂದ ಕುರಿ ಮತ್ತು ಮೇಕೆಗಳಿಗೆ ರೋಗ ಲಕ್ಷಣಗಳನ್ನು ವೈದ್ಯರು ಪರೀಸಿ ಲಸಿಕೆ ನೀಡುತ್ತಿದ್ದಾರೆ.
ಪಶು ಇಲಾಖೆ ವತಿಯಿಂದ ಕುರಿ ಮತ್ತು ಮೇಕೆಗಳಿಗೆ ರೋಗ ಲಕ್ಷಣಗಳನ್ನು ವೈದ್ಯರು ಪರೀಸಿ ಲಸಿಕೆ ನೀಡುತ್ತಿದ್ದಾರೆ.

ವಿ.ಮುನಿವೆಂಕಟೇಗೌಡ ಕೋಲಾರ
ಜಿಲ್ಲೆಯಾದ್ಯಂತ ಕುರಿ ಮತ್ತು ಮೇಕೆಗಳಲ್ಲಿ ಹೊಟ್ಟೆ ಮತ್ತು ಬಾಯಿ ಹುಣ್ಣು (ಪಿಪಿಆರ್​ ವೈರಸ್​ ಅಥವಾ ಮೇಕೆ ಪ್ಲೇಗ್​) ಕಾಣಿಸಿಕೊಳ್ಳುತ್ತಿದ್ದು ನಿಯಂತ್ರಣಕ್ಕೆ ಪಶು ಇಲಾಖೆ ಮುಂದಾಗಿದ್ದು, ರೋಗ ನಿಯಂತ್ರಣಕ್ಕೆ ಬರುತ್ತಿದೆ. ಜಿಲ್ಲೆಯಾದ್ಯಂತ 4,15,285 ಕುರಿ, 70,370 ಮೇಕೆಗಳಿದ್ದು, ಇವುಗಳಿಗೆ ಇತ್ತೀಚೆಗೆ ಸೋಂಕು ಕಾಣಿಸಿಕೊಂಡ ಪರಿಣಾಮ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಕಣ್ಣು ಮತ್ತು ಮೂಗಿನಲ್ಲಿ ಗೀಜು ಕಾಣಿಸಿಕೊಂಡು ಮೇವು ಬಿಟ್ಟು ಮಂಕಾಗಿದ್ದವು. ಪಶು ಇಲಾಖೆ ಪ್ರಕಾರ ಜಿಲ್ಲೆಯಲ್ಲಿ 4,07,265 ಕುರಿಗಳಿಗೆ ಮತ್ತು 67,581 ಮೇಕೆಗಳಿಗೆ ವ್ಯಾಕ್ಸಿನ್​ ನೀಡುವ ಮೂಲಕ ಬಾಯಿಹುಣ್ಣು ಮತ್ತು ಹೊಟ್ಟೆ ಹುಣ್ಣು ಆಗುವ ಲಕ್ಷಣಗಳನ್ನು ನಿಯಂತ್ರಣಕ್ಕೆ ತರಲಾಗಿದ್ದು, ಶೇ.90 ವ್ಯಾಕ್ಸಿನ್​ ಕಾರ್ಯ ಮುಗಿದಿದೆ.
ರೋಗಕ್ಕೆ ಕಾರಣ: ರೋಗವು ಪ್ಯಾರಾಮಿಕ್ಸೋ ವೈರಸ್​ ಗುಂಪಿಗೆ ಸೇರಿದ ಮಾರ್ಬಿಲಿ ಎಂಬ ವೈರಾಣುಗಳಿಂದ ಬರುತ್ತದೆ. ಮಿಸಲ್ಸ್​ ಡೆಸ್ಟೆಂಪರ್​ ಹಾಗೂ ದೊಡ್ಡ ರೋಗ ಉಂಟು ಮಾಡುವ ವೈರಸ್​ಗಳೂ ಇದೆ ಗುಂಪಿಗೆ ಸೇರಿವೆ.
ರೋಗ ಹರಡುವಿಕೆ: ಈ ರೋಗವು ಧೂಳು ಮತ್ತು ಶುಷ್ಕ ವಾತಾವರಣಗಳಲ್ಲಿ ಅಥವಾ ರೋಗಗ್ರಸ್ತ ಕುರಿ ಮತ್ತು ಮೇಕೆಗಳ ಮಲಮೂತ್ರದ ನೇರ ಸಂರ್ಪಕದಿಂದ ಬರುವ ಅಂಟುಜಾಡ್ಯವಾಗಿದೆ. ಸೋಂಕು ತಗುಲಿದ 4&10 ದಿನಗಳಲ್ಲಿ ರೋಗ ಕಾಣಿಸಿಕೊಳ್ಳುತ್ತದೆ.
ಔಷಧೋಪಚಾರ ಅಗತ್ಯ: ರೋಗಗ್ರಸ್ತ ಪ್ರಾಣಿಗಳನ್ನು ಬೇರ್ಪಡಿಸಿ ಗಾಯಗಳನ್ನು ಪೊಟ್ಯಾಸಿಯಂ ಪರಮಾಂಗನೇಟ್​ ದ್ರಾವಣದಿಂದ ಶುಚಿಗೊಳಿಸಿ ಆ ಜಾಗಕ್ಕೆ ಕ್ರಿಮಿನಾಶಕ ಸಿಂಪಡಿಸಿ ಸ್ವಚ್ಛವಾಗಿಡಬೇಕು. ನೋವು, ಜ್ವರ ನಿಯಂತ್ರಣಕ್ಕೆ ಅಂಟಿಬಯೋಟಿಕ್ಸ್​ ನಿಂದ ಔಷಧೋಪಚಾರ ಮಾಡಬೇಕು.

ಕಂದುರೋಗ ನಿಯಂತ್ರಣಕ್ಕೆ ಲಸಿಕೆ: ಫೆ.13 ರಿಂದ ಜಿಲ್ಲೆಯಾದ್ಯಂತ 4&8 ತಿಂಗಳ ವಯಸ್ಸಿನ ಕರುಗಳಿಗೆ ಕಂದು ರೋಗ ನಿವಾರಣೆಗೆ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಉದ್ದೇಶ ಕರುಗಳು ದೊಡ್ಡದಾದ ನಂತರ ಗರ್ಭ ಧರಿಸಿದ ಸಂದರ್ಭದಲ್ಲಿ ಗರ್ಭಪಾತ ತಡೆಯಲು 4&8 ತಿಂಗಳ ಹೆಣ್ಣು ಕರುಗಳಿಗೆ ಲಸಿಕೆ ಹಾಕುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಪಶು ಪಾಲನಾ ಇಲಾಖೆಯ ನಿರ್ದೇಶಕ ತುಳಸಿರಾಮ್​ ತಿಳಿಸಿದ್ದಾರೆ.

ಪ್ರಾರಂಭದಲ್ಲಿಯೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪಿಪಿಆರ್​ ವ್ಯಾಕ್ಸಿನ್​ ಅಭಿಯಾನ ನಡೆಸಲಾಗಿದೆ. ಇದರಿಂದ ಈ ಕಾಯಿಲೆ ಹತೋಟಿಗೆ ಬರುವಂತಾಗಿದೆ. ಮುನ್ನೆಚ್ಚರಿಕೆಯಾಗಿ ವ್ಯಾಕ್ಸಿನ್​ ಅಭಿಯಾನ ಹಮ್ಮಿಕೊಂಡ ಕಾರಣ ಕುರಿ ಮತ್ತು ಮೇಕೆಗಳಲ್ಲಿ ಹೆಚ್ಚಿನ ಸಾವು ಸಂಭವಿಸಿಲ್ಲ. ಜ.11ರಿಂದ ಫೆ.5ರ ತನಕ ಜಿಲ್ಲೆಯಾದ್ಯಂತ ಶೇ.90 ವ್ಯಾಕ್ಸಿನ್​ ಹಾಕಲಾಗಿದೆ. ತುಳಸಿರಾಮ್​, ನಿರ್ದೇಶಕರು ಪಶು ಪಾಲನಾ ಇಲಾಖೆ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net