

ಹಲಗೂರು: ಪಾಲಕರು ನಿಮ್ಮ ಮೇಲೆ ನಂಬಿಕೆ ಇಟ್ಟು ನಿಮಗೆ ಶಿಕ್ಷಣ ಕೊಡಿಸಿ ನಿಮ್ಮನ್ನು ಉತ್ತಮ ಪ್ರಜೆಯನ್ನಾಗಿ ಮಾಡಬೇಕು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ. ಅವರ ನಿರೀಕ್ಷೆಯನ್ನು ಪೂರೈಸಬೇಕು ಎಂದು ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ನಾಗರಾಜು ಕರೆ ನೀಡಿದರು.
ಸಮೀಪದ ಹುಸ್ಕೂರು ಗ್ರಾಮದ ಬಾಲಾಜಿ ಎಜುಕೇಷನ್ ಟ್ರಸ್ಟ್ ವತಿಯಿಂದ ಸ್ಪಂದನ ಪಬ್ಲಿಕ್ ಸ್ಕೂಲ್ ಅವರಣದಲ್ಲಿ ಅಯೋಜಿಸಿದ್ದ ‘ಸ್ಪಂದನ-ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ, ಅದನ್ನು ಗುರುತಿಸಿ ಆ ಕ್ಷೇತ್ರದಲ್ಲಿ ಬೆಳೆಯಲು ಸೂಕ್ತ ವಾತಾವರಣ ಕಲ್ಪಿಸಬೇಕು. ನಿರಂತರ ಪರಿಶ್ರಮ ವಹಿಸಿದರೆ ಸಾಧನೆ ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ಪಾಲಕರ ಆಶಯಗಳನ್ನು ಈಡೇರಿಸಲು ಶ್ರಮವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ಮೂಳೆ ತಜ್ಞ ಡಾ.ಪ್ರದೀಪ್ ಎ.ರಮೇಶ್ ಮಾತನಾಡಿ, ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಎಷ್ಟು ಕಷ್ಟಪಡುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನೀವು ಶ್ರದ್ಧೆಯಿಂದ ಓದಿ ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಒಂದೇ ರೀತಿ ಇರುವುದಿಲ್ಲ. ಒಬ್ಬೊಬ್ಬರಲ್ಲಿ ಒಂದು ಕಲಿಕಾ ರೀತಿ ಇರುತ್ತದೆ. ಅದನ್ನು ಗುರುತಿಸಿ ಅವರನ್ನು ಉತ್ತೇಜಿಸಿ ಅವರಿಗೆ ಕಲಿಕಾ ವಿಧಾನದಲ್ಲಿ ತರಬೇತಿ ನೀಡಿದರೆ ಅವರು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಮತ್ತು ಪಾಲಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆ ಹಾಗೂ ಕಲಿಕಾ ರೀತಿಯನ್ನು ಗುರುತಿಸಿ ಪ್ರೋತ್ಸಾಹಿಸುವಂತಾಗಬೇಕು. ಆಗ ಅವರಲ್ಲಿ ಓದುವುದರಲ್ಲೂ ಹೆಚ್ಚಿನ ಆಸಕ್ತಿ ಬರುತ್ತದೆ ಎಂದರು.
ಪುಟ್ಟಕ್ಕನ ಮಕ್ಕಳ ಕಿರುತೆರೆ ನಟಿ ಅಕ್ಷರ, ಇಂಜಿನಿಯರ್ ನವೀನ್ ಶೆಟ್ಟಿ ಮಾತನಾಡಿದರು. ಮದ್ದೂರು ತಾಲೂಕಿನ ಯಲಾದಹಳ್ಳಿ ಗ್ರಾಮದ ನಿವೃತ್ತ ಯೋಧ ಜವರೇಗೌಡ ಮತ್ತು ಇತರರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ನೃತ್ಯ, ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಬಾಲಾಜಿ ಟ್ರಸ್ಟ್ ಅಧ್ಯಕ್ಷ ಎಚ್.ಕೆ.ಕೆಂಪೇಗೌಡ, ಕಾರ್ಯದರ್ಶಿ ಎಚ್.ಕೆ.ಕೃಷ್ಣಮೂರ್ತಿ, ವೃತ್ತ ನಿರೀಕ್ಷಕ ಶ್ರೀಧರ, ನವೀನ್ ಶೆಟ್ಟಿ, ಡಾ.ಡಿ.ಮಂಜುನಾಥ್, ಯ ಕೆ.ಎಸ್.ದ್ಯಾಪೇಗೌಡ, ಹುಲ್ಲಹಳ್ಳಿ ಶಿವಮಾದೇಗೌಡ, ಶಿವಲಿಂಗೇಗೌಡ, ಶಿಕ್ಷಣ ಸಂಯೋಜಕ ರವಿಕುಮಾರ್ ಸಿ.ಆರ್.ಪಿ ಸಿದ್ದರಾಜು, ಕೃಷ್ಣೇಗೌಡ ಹುಸ್ಕೂರು, ಶಿಕ್ಷಕ ಹರೀಶ್ ಕುಮಾರ್, ಎಚ್.ಕೆ.ದೇವರಾಜು, ಪೋಷಕರಾದ ಚಿಕ್ಕೀರೇಗೌಡ, ಪುಟ್ಟಸ್ವಾಮಿ, ರಾಜೇಶ್, ಮುಖ್ಯ ಶಿಕ್ಷಕಿ ಕಮಲಾ ಇತರರಿದ್ದರು.