ನಿಮ್ಮ ಜೀವಕ್ಕೆ ನೀವೇ ರಕ್ಷಕರು

5 KWR 6A
Published on

ಕಾರವಾರ: ಪ್ರತಿಯೊಬ್ಬರ ಸುರಕ್ಷತೆ ಸರ್ಕಾರದಿಂದ ಸಾಧ್ಯವಿಲ್ಲ. ನಿಮ್ಮ ಜೀವಕ್ಕೆ ನೀವೇ ರಕ್ಷಕರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಜಿಲ್ಲೆಯ ಜನರನ್ನು ಎಚ್ಚರಿಸಿದರು.

ನಗರದ ಹೆಸ್ಕಾಂ ಕಚೇರಿ ಎದುರು ಇಂದಿರಾ ಕ್ಯಾಂಟೀನ್ ಹಾಗೂ ತೋಡೂರು ಗ್ರಾಪಂ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಕರೊನಾದಿಂದ ಬಚಾವ್ ಆಗಲು ಲಾಕ್​ಡೌನ್ ಒಂದೇ ಮಾರ್ಗವಾಗಿತ್ತು. ಅನಿವಾರ್ಯವಾಗಿ ಲಾಕ್​ಡೌನ್ ಮಾಡಲಾಯಿತು. ಇದರಿಂದ ಪ್ರತಿಯೊಬ್ಬರಿಗೂ ಹಾನಿಯಾಗಿದೆ. ಅಷ್ಟೇ ಏಕೆ ನೌಕರರಿಗೆ ವೇತನ ನೀಡಲು ಸರ್ಕಾರ ಸಾಲ ಮಾಡುವ ಪರಿಸ್ಥಿತಿ ಬಂದಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯಂತೆ ಕರೊನಾ ಇನ್ನೂ ಎರಡ್ಮೂರು ವರ್ಷ ಮುಗಿಯದು. ಅಲ್ಲಿಯವರೆಗೆ ಲಾಕ್​ಡೌನ್ ಮಾಡಿದರೆ ದೇಶದ, ರಾಜ್ಯದ ಆರ್ಥಿಕತೆಗೆ ಉಳಿಗಾಲವಿಲ್ಲ. ಹಾಗಾಗಿ ಲಾಕ್​ಡೌನ್ ತೆರವು ಮಾಡಿ ಆರ್ಥಿಕ ಚಟುವಟಿಕೆಗೆ ಅನುಕೂಲ ಮಾಡಿಕೊಡಲಾಗಿದೆ. ಆದರೆ, ಎರಡು ತಿಂಗಳು ಕರೊನಾದಿಂದ ಆಗುವ ಅಪಾಯ, ಅದರಿಂದ ಬಚಾವ್ ಆಗುವ ವಿಧಾನಗಳ ಬಗ್ಗೆ ಸರ್ಕಾರ ಜನರಿಗೆ ತಿಳಿಸಿಕೊಟ್ಟಿದೆ. ಜನರು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಬೇಕು. ಉಚಿತ ವೈದ್ಯಕೀಯ ಸೌಲಭ್ಯ ನೀಡುವ ಜವಾಬ್ದಾರಿ ಸರ್ಕಾರದ್ದು ಎಂದರು.

ಸರ್ಕಾರ ಕಾರ್ವಿುಕರನ್ನು ಉಪವಾಸ ಇರಲು ಬಿಟ್ಟಿಲ್ಲ. ಮಠ, ಮಂದಿರಗಳು, ಫೌಂಡೇಷನ್​ಗಳ ಸಹಕಾರದಿಂದ ಬೆಂಗಳೂರಿನಲ್ಲಿ ಇದುವರೆಗೆ 75 ಲಕ್ಷಕ್ಕಿಂತ ಹೆಚ್ಚು ಬಡ ಕಾರ್ವಿುಕರಿಗೆ ಸರ್ಕಾರ ಊಟ ನೀಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಶಾಲೆಯ ಪ್ರಾರಂಭ ವಿಳಂಬವಾಗಬಹುದು. ಪಾಲಕರು ತಮ್ಮ ಮನೆಯಲ್ಲಿ ಮಕ್ಕಳಿಗೆ ಸಾಮಾನ್ಯ ಜ್ಞಾನದ ವಿಷಯಗಳನ್ನು ಕಲಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ., ಜಿಪಂ ಸಿಇಒ ಎಂ. ರೋಶನ್, ಎಸ್​ಪಿ ಶಿವಪ್ರಕಾಶ ದೇವರಾಜು, ಡಿಎಫ್​ಒ ಡಾ. ಜಿ.ಆರ್. ಅಜ್ಜಯ್ಯ, ಉಪವಿಭಾಗಾಧಿಕಾರಿ ಪ್ರಿಯಾಂಗಾ ಎಂ. ಇದ್ದರು.

ಕ್ಯಾಂಟೀನ್ ಉದ್ಘಾಟನೆ
ಅಂಕೋಲಾ:
ಪಟ್ಟಣದ ಕೆ.ಸಿ. ರಸ್ತೆಯಲ್ಲಿ ನಿರ್ವಣಗೊಂಡಿರುವ ಇಂದಿರಾ ಕ್ಯಾಂಟೀನ್ ಅನ್ನು ಸಚಿವ ಶಿವರಾಮ ಹೆಬ್ಬಾರ ಶುಕ್ರವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಈ ಕ್ಯಾಂಟೀನ್​ನಿಂದ ಬಡ ಜನರಿಗೆ ಅನುಕೂಲವಾಗಲಿದೆ. ಕಾರ್ವಿುಕ ಇಲಾಖೆಯೂ ಇದರ ಖರ್ಚು ನೀಡಲಿದೆ ಎಂದರು. ಶಾಸಕಿ ರೂಪಾಲಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತಾ ಗಾಂವಕರ, ಕುಮಟಾ ಉಪ ವಿಭಾಗಧಿಕಾರಿ ಎಂ. ಅಜಿತ್, ತಹಸೀಲ್ದಾರ್ ಉದಯ ಕುಂಬಾರ, ಪುರಸಭೆ ಸದಸ್ಯರಾದ ವಿಶ್ವನಾಥ ನಾಯ್ಕ, ಜಯಪ್ರಕಾಶ ನಾಯ್ಕ, ಕಾರ್ತಿಕ ನಾಯ್ಕ, ಇಂಜಿನಿಯರ್ ಭಾಸ್ಕರ ಗೌಡ, ಭಾಸ್ಕರ್ ನರ್ವೆಕರ, ರಾಜೇಂದ್ರ ನಾಯ್ಕ, ನಾಗೇಂದ್ರ ನಾಯ್ಕ ಇದ್ದರು.

ಐಆರ್​ಬಿ, ಎನ್​ಎಚ್​ಎಐ ಅಧಿಕಾರಿಗಳಿಗೆ ತರಾಟೆ
ಅರೆಬರೆ, ಅವೈಜ್ಞಾನಿಕ ಚತುಷ್ಪಥ ಕಾಮಗಾರಿ ನಡೆಸಿದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್​ಬಿ ಗುತ್ತಿಗೆ ಕಂಪನಿ ಅಧಿಕಾರಿಗಳನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿ ಈ ಸಂಬಂಧ ಸಭೆ ನಡೆಸಿ, ಸುರಕ್ಷತಾ ಕ್ರಮಗಳ ಬಗ್ಗೆ ಗಮನ ಹರಿಸಬೇಕು. ಐಆರ್​ಬಿ ನಿಯಮಗಳನ್ನು ಪಾಲಿಸಬೇಕು ಎಂದು ಎಚ್ಚರಿಕೆ ನೀಡಿದರು. ವಿವಿಧೆಡೆ ಚರಂಡಿ ಕಾಮಗಾರಿ ಅರೆಬರೆಯಾಗಿದೆ. ಮನೆಗಳಿಗೆ, ಜಮೀನಿಗೆ ನೀರು ನುಗ್ಗುತ್ತಿದೆ. ಹೆದ್ದಾರಿಯಲ್ಲಿ ನೀರು ತುಂಬುತ್ತಿದೆ. ಗುಡ್ಡ ಕುಸಿಯುವ ಪರಿಸ್ಥಿತಿ ಇದೆ ಎಂದು ಸಚಿವ ಹೆಬ್ಬಾರ ಅಸಮಾಧಾನ ವ್ಯಕ್ತಪಡಿಸಿದರು. ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಆಗಾಗ ನೀರು ಬಿಟ್ಟು ಅಣೆಕಟ್ಟಿನ ಮಟ್ಟವನ್ನು ನಿಯಂತ್ರಿಸುವಂತೆ ಕೆಪಿಸಿ ಅಧಿಕಾರಿಗಳಿಗೆ ಸೂಚಿಸಿದರು. ಜನ ಪ್ರತಿನಿಧಿಗಳು, ಅಧಿಕಾರಿಗಳು ಸಭೆಯಲ್ಲಿದ್ದರು.

ವಿಧಾನ ಪರಿಷತ್ ಟಿಕೆಟ್, ಮುಖ್ಯಮಂತ್ರಿ ಜತೆ ಚರ್ಚೆ
ಎಚ್.ವಿಶ್ವನಾಥ ಹಾಗೂ ಎಂ.ಟಿ.ಬಿ. ನಾಗರಾಜ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡುವ ಬಗ್ಗೆ ಸಿಎಂ ಯಡಿಯೂರಪ್ಪ ಅವರ ಜತೆ ರ್ಚಚಿಸುವುದಾಗಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ 17 ಶಾಸಕರಲ್ಲಿ ಮೂವರು ಉಪ ಚುನಾವಣೆಯಲ್ಲಿ ಸೋಲು ಕಂಡರು. ಸರ್ಕಾರ ರಚನೆಯಲ್ಲಿ ಅವರದ್ದೂ ಪಾಲಿದೆ. ಮಂತ್ರಿ ಸ್ಥಾನ ಬಿಟ್ಟು ಕೊಟ್ಟಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಸಿದ್ದರಾಮಯ್ಯ ಅವರು ರಾಜಕಾರಣಕ್ಕಾಗಿ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ರಾಜಕಾರಣ ಮಾಡಲು ಏನಾದರೂ ವಿಷಯ ಬೇಕಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net