

ತುಮಕೂರು : ರಾಜ್ಯ ಮಟ್ಟದಲ್ಲಿ ತೀರ್ಮಾನಿಸಿದ ಕಾರ್ಯಕ್ರಮಗಳ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ, ವಿಡಿಯೋ ಕಾನ್ಫರೆನ್ಸ್ ಬದಲಾಗಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಪರಿಣಾಮ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚಿಸಿ ಎಂದು ಜಿಲ್ಲಾಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಕಚೇರಿಯಿಂದ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಜತೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಮಾಧುಸ್ವಾಮಿ, ನಮ್ಮ ಬೇಡಿಕೆಗೆ ಅನುಗುಣವಾದ ಆಮ್ಲಜನಕ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಗೆ ಅಗತ್ಯವಿರುವಷ್ಟು ಆಮ್ಲಜನಕ ಪೂರಕೆಯಾಗುತ್ತಿಲ್ಲ, ಕೈಗಾರಿಕೋದ್ಯಮಿಗಳ ಸಹಾಯದಿಂದ ಆಮ್ಲಜನಕ ಸಾಂದ್ರಕಗಳ ಪೂರಕೆಯ ನೆರವು ಪಡೆಯಲಾಗಿದೆ. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಮಾಣ ಕಡಿಮೆಯಾಗುತ್ತಿದೆ. ಗುರಿ ನಿಗದಿಯಂತೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮೊದಲನೇ ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಲಸಿಕೆ ನೀಡಲು ಕನಿಷ್ಠ 12 ವಾರ ಸಮಯ ನಿಗದಿ ಮಾಡಲಾಗಿದೆ, ಈ ಅವಧಿಯವರು ಜಿಲ್ಲೆಯಲ್ಲಿಲ್ಲ ಎಂಬ ಸಚಿವರ ಮಾಹಿತಿಗೆ, 45 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಡೋಸ್ ಕೊಡಿ ಎಂದು ಸಿಎಂ ಸೂಚಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಡಿಎಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸಚಿಕಿತ್ಸಕ ಡಾ.ಸುರೇಶಬಾಬು ಇದ್ದರು.
ಆಮ್ಲಜನಕ ಸರಬರಾಜು ವಾಹನ ಕೊರತೆ : ಆಮ್ಲಜನಕ ಹಾಸಿಗೆ ನಿರ್ವಹಣೆ ಮತ್ತು ಆಮ್ಲಜನಕ ಆಮದು ಮಾಡಿಕೊಳ್ಳುವ ಬಗ್ಗೆ ಮತ್ತೊಂದು ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನದಾಸ್ ಸಿಂಗ್‌ಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಸರ್ಕಾರದ ಅದೇಶದಂತೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಕನಕ ಹಾಸಿಗೆಗಳ ನಿರ್ವಹಣೆ ಮಾಡಲಾಗುತ್ತಿದೆ, ಜಿಲ್ಲೆಯಲ್ಲಿ ಆಮ್ಲಜನಕ ಸರಬರಾಜು ಮತ್ತು ರೀಫಿಲ್ ಮಾಡುವಾಗ ಏರ್ ವಾಟರ್‌ನಂತಹ ತಾಂತ್ರಿಕ ಸಮಸ್ಯೆಗಳು ಕಾಣಬರುತ್ತಿವೆ. ಬಳ್ಳಾರಿಂದ ಆಮ್ಲಜನಕವನ್ನು ತುಂಬಿಸಿಕೊಳ್ಳಲಾಗುತ್ತಿದೆ ಎಂದರು. ಜಿಲ್ಲೆಗೆ ನೀಡಲಾಗಿರುವ ಆಮ್ಲಜನಕ ಸರಬರಾಜು ವಾಹನ ಕೊರತೆಯಿದೆ ಎಂದು ಗಮನಕ್ಕೆ ತಂದರು.