ನಿಮಿಷಾಂಬ ದರ್ಶನ ಪಡೆದ ಶಿವರಾಜ್ ಕುಮಾರ್

SRP_01-01jpg
Published on

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಸಮೀಪದ ಗಂಜಾಂನ ಶ್ರೀ ನಿಮಿಷಾಂಬ ದೇವಾಲಯಕ್ಕೆ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಪತ್ನಿ ಗೀತಾ ಸಮೇತ ಆಗಮಿಸಿ ಶಕ್ತಿದೇವತೆಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

ತಮ್ಮ ಕುಟುಂಬದ ಕೆಲವೇ ಆಪ್ತರೊಂದಿಗೆ ಮಂಗಳವಾರ ಬೆಳಗ್ಗೆ ದೇವಾಲಯಕ್ಕೆ ಆಗಮಿಸಿದ್ದ ಅವರು ತಾಯಿ ನಿಮಿಷಾಂಬ ದೇವಿಯ ಸನ್ನಿಧಿಯಲ್ಲಿ ಸಂಕಲ್ಪ ಸಹಿತ ಪೂಜೆ ಸಲ್ಲಿಸಿದರು.

ಪ್ರಧಾನ ಅರ್ಚಕ ಸೂರ್ಯನಾರಾಯಣ ಭಟ್ ದೇವಿಗೆ ಅರ್ಚನೆ ನೆರವೇರಿಸಿ ಪ್ರಸಾದ ವಿತರಿಸಿದರು. ರಾಜ್ಯೋತ್ಸವ ದಿನದಂದು ತಮ್ಮ ಸಹೋದರ ಪವರ್ ಸ್ಟಾರ್ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ಸರ್ಕಾರದಿಂದ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಹಿನ್ನೆಲೆಯಲ್ಲಿ ಸುಮಾರು 25 ನಿಮಿಷ ದೇವಾಲಯದಲ್ಲಿನ ಗಣಪತಿ, ಸೂರ್ಯನಾರಾಯಣ ಹಾಗೂ ಆಂಜನೇಯಸ್ವಾಮಿಗೆ ವಿಶೇಷ ಪ್ರಾರ್ಥನೆಯೊಂದಿಗೆ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕಿ ಕೆಲನಿಮಿಷ ನೆಲದಮೇಲೆ ಕುಳಿತು ಧ್ಯಾನಿಸಿದರು. ಬಳಿಕ ತಮ್ಮ ಐಷಾರಾಮಿ ಕಾರುಗಳಿಗೂ ಅರ್ಚಕರಿಂದ ಪೂಜೆ ಮಾಡಿಸಿಕೊಂಡರು. ಸ್ವತಃ ತಾವೇ ಕಾರು ಚಲಾಯಿಸಿಕೊಂಡು ಬೆಂಗಳೂರಿಗೆ ತೆರಳಿದರು.ಕನ್ನಡ ರಾಜ್ಯೋತ್ಸವದ ರಜೆ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಎಲ್ಲರೂ ನೆಚ್ಚಿನ ನಟನನ್ನು ಕಂಡು ಬೆರಗಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net