

ಶ್ರೀರಂಗಪಟ್ಟಣ : ಪವರ್ ಸ್ಟಾರ್ ಡಾ.ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ ಗಂಧದಗುಡಿ ಯಶಸ್ಸಿಗೆ ಪ್ರಾರ್ಥಿಸಿ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಶುಕ್ರವಾರ ಗಂಜಾಂನ ಶಕ್ತಿದೇವತೆ ಶ್ರೀ ನಿಮಿಷಾಂಬ ದೇವಿ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದ ಗಂಜಾಂನಲ್ಲಿರುವ ದೇಗುಲಕ್ಕೆ ಶುಕ್ರವಾರ ಬೆಳಗ್ಗೆ ಗಂಧದಗುಡಿ ಸಾಕ್ಷ್ಯಚಿತ್ರದ ನಿರ್ದೇಶಕ ಅಮೋಘವರ್ಷ ಹಾಗೂ ಅವರ ಕುಟುಂಬದೊಂದಿಗೆ ಬೆಳಗ್ಗೆ 8.25ಕ್ಕೆ ಆಗಮಿಸಿದ ಅವರು ಜೀವನದಿ ಕಾವೇರಿಗೆ ನಮಿಸಿ ನಿಮಿಷಾಂಬೆ ದೇವಿಗೆ ಅರ್ಚನೆ ಮಾಡಿಸಿದರು.
ದೇವಾಲಯದ ಪ್ರಧಾನ ಅರ್ಚಕ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ವೈದಿಕರು ಶ್ರೀಚಕ್ರಕ್ಕೆ ಕುಂಕುಮಾರ್ಚನೆ ಸಹಿತ ದೇವಿಗೆ ವಿಶೇಷ ಪೂಜೆ ನೆರವೇರಿಸಿದರು. ದೇವಾಲಯದ ಪ್ರಾಂಗಣದಲ್ಲಿನ ಸೂರ್ಯದೇವ, ಗಣಪತಿ ಹಾಗೂ ಆಂಜನೇಯಸ್ವಾಮಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‌ಕುಮಾರ್ ದೇವರ ಪ್ರಸಾದ ವಿತರಿಸಿದರು.
ಅಭಿಮಾನಿಗಳ ಪ್ರೀತಿಯ ನಿರೀಕ್ಷೆ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಿತ್ರದ ನಿರ್ದೆಶಕ ಅಮೋಘವರ್ಷ, ಗಂಧದಗುಡಿ ಸಾಕ್ಷ್ಯಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಇನ್ನು ಮುಂದೆ ಇದು ಅಭಿಮಾನಿಗಳ ಸಿನಿಮಾ ಎಂದರು. ಅಭಿಮಾನಿಗಳು ನೋಡಿ ಪ್ರೀತಿ ಕೊಟ್ಟರೆ ಅದಕ್ಕಿಂತಾ ಬೇರೆ ನಿರೀಕ್ಷೆ ಏನೂ ಇಲ್ಲ ಎಂದರು. ಪುನೀತ್ ಅವರು ಬಿಟ್ಟು ಹೋದ ಕೊನೆಯ ಕಥೆ ಇದು. ಅವರು ಹೇಳಿ ಕೊಟ್ಟ ಸಂಗತಿಗಳನ್ನೆಲ್ಲಾ ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಆದರೆ ಅವರನ್ನು ಕೋಟ್ಯಂತರ ಮನಸ್ಸುಗಳು ಕಳೆದುಕೊಂಡಿರುವುದೇ ದೊಡ್ಡ ಬೇಸರ ಎಂದರು.
ನಿಶ್ಚಯಿಸಿದ್ದು ಇಲ್ಲೇ: ಗಂಧದ ಗುಡಿಯಂತಹ ಅಮೂಲ್ಯ ಸಾಕ್ಷ್ಯಚಿತ್ರವನ್ನು ನಿರ್ಮಿಸಲು ಪುನೀತ್ ಮೊದಲು ನಿಶ್ಚಯಿಸಿದ್ದು ಇದೇ ಶಕ್ತಿದೇವತೆಯ ಸನ್ನಿಧಿಯಲ್ಲಿ ಎಂದು ದೇವಾಲಯದ ಅರ್ಚಕ ಸೂರ್ಯನಾರಯಣ ಭಟ್ ನೆನಪಿಸಿಕೊಂಡರು. ನಿಮಿಷಾಂಬ ದೇಗುಲಕ್ಕೂ ಪುನೀತ್‌ಗೂ ಅವಿನಾಭಾವ ಸಂಬಂಧ ಇತ್ತು ಎಂದು ಅವರು ನೆನೆದರು. ರಾಜ್ ಕುಟುಂಬದ ಪ್ರತಿ ಚಿತ್ರಗಳ ಬಿಡುಗಡೆ ವೇಳೆ ಆಗಮಿಸಿ ತಾಯಿ ದರ್ಶನ ಪಡೆಯುವುದು ಪುನೀತ್ ರಾಜ್ ಕುಮಾರ್‌ಗೆ ಅಭ್ಯಾಸವಾಗಿತ್ತು. ‘ಗಂಧದ ಗುಡಿ’ ನಿರ್ಧಾರವಾಗಿದ್ದು ಇಲ್ಲೇ. ಆದರೆ ಸಿನಿಮಾ ಬಿಡುಗಡೆ ದಿನ ಅವರಿಲ್ಲ ಎಂಬುದೇ ಬೇಸರ. ಆದರೂ ಸಿನಿಮಾ ಯಶಗಳಿಸಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದರು.