

ಆನೇಕಲ್: ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಅಧಿಕಾರಿಗಳು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 25ಕ್ಕೂ ಹೆಚ್ಚು ಪ್ರಭೇದದ 500ಕ್ಕೂ ಹೆಚ್ಚು ಪಕ್ಷಿಗಳಿವೆ. ಉದ್ಯಾನದ ಸುತ್ತಮುತ್ತ ಹಾಗೂ ಕಾಡಿನಲ್ಲಿ ಬಾವಲಿಗಳು ಹೆಚ್ಚಾಗಿದ್ದು, ವೈದ್ಯಾಧಿಕಾರಿಗಳು ಹಾಗೂ ವಿಜ್ಞಾನಿಗಳು ಅವುಗಳ ಮೇಲೆ ನಿಗಾ ವಹಿಸಿದ್ದಾರೆ.
ಪಾರ್ಕಿಗೆ ಬರುವ ಪ್ರವಾಸಿಗರು ಕರೊನಾ ಮಾರ್ಗಸೂಚಿ ಪಾಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಉದ್ಯಾನದ ಆವರಣದಲ್ಲಿರುವ ಐನೂರಕ್ಕೂ ಹೆಚ್ಚು ಪಕ್ಷಿಗಳು ಶೆಡ್ ಒಳಭಾಗದಲ್ಲಿರುವ ಕಾರಣ, ಹೊರಭಾಗದಿಂದ ಯಾವುದೇ ಪಕ್ಷಿಗಳು ಅತ್ತ ಸುಳಿಯದಂತೆ ಎಚ್ಚರಿಕೆ ವಹಿಸಲಾಗಿದೆ.
ಪ್ರವಾಸಿಗರ ಆಗಮನ ನಿರಂತರವಾಗಿರುವ ಕಾರಣ ಭದ್ರತೆ ಹೆಚ್ಚಿಸಲಾಗಿದೆ. ಈಗ ಕೇರಳದಲ್ಲಿ ನಿಫಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಉದ್ಯಾನದಲ್ಲಿ ಕೂಡ ಹೆಚ್ಚಿನ ತಪಾಸಣೆ ಹಾಗೂ ಪಕ್ಷಿಗಳ ಮೇಲೆ ಹಾಗೂ ಸುತ್ತಮುತ್ತ ಇರುವ ಬಾವಲಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಉದ್ಯಾನದ ವೈದ್ಯಾಧಿಕಾರಿ ಡಾ. ಉಮಾಶಂಕರ್ ತಿಳಿಸಿದ್ದಾರೆ.
ಬಾವಲಿಗಳು ಇವೆ ಎಂಬ ಮಾತ್ರಕ್ಕೆ ಸೋಂಕು ಹರಡುತ್ತದೆ ಎನ್ನಲಾಗದು. ಆದರೂ ಬಾವಲಿಗಳು ಇರುವ ಭಾಗದಲ್ಲಿ ಕೆಲವು ದಿನ ಯಾರೂ ಕೂಡ ಹೋಗದಿರುವುದು ಒಳ್ಳೆಯದು. ಈ ಸೋಂಕು ಮೊದಲು ಹೊರರಾಷ್ಟ್ರಗಳಲ್ಲಿ ಕಂಡುಬಂದಿತ್ತು. ಜಾಗತೀಕರಣದ ಹಿನ್ನೆಲೆಯಲ್ಲಿ ಸೋಂಕು ಈ ಭಾಗಕ್ಕೂ ಹರಡಿದೆ. ಡಾ. ಮಂಜುನಾಥ್, ಬನ್ನೇರುಘಟ್ಟ ಜೈವಿಕ ಉದ್ಯಾನದ ವಿಜ್ಞಾನಿ