

ನಿಪ್ಪಾಣಿ: ಕಳೆದ ಎರಡು ಅವಧಿಯಲ್ಲಿ ತಾಲೂಕಿನಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಬಾಕಿ ಉಳಿದ ಕಾರ್ಯಗಳನ್ನು ಹಂತ ಹಂತವಾಗಿ ನೆರವೇರಿಸಿ, ನಿಪ್ಪಾಣಿ ತಾಲೂಕನ್ನು ರಾಜ್ಯದಲ್ಲೆ ನಂ.1 ಮಾಡುವುದು ನನ್ನ ಗುರಿಯಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಪಟ್ಟಣದ ಬಸವಜ್ಯೋತಿ ಗಾರ್ಮೆಂಟ್ಸ್‌ನಲ್ಲಿ ವಿವಿಧ ಯೋಜನೆಗಳಡಿ ತಾಲೂಕಿನ 272 ಫಲಾನುಭವಿಗಳಿಗೆ ಒಟ್ಟು 74.25 ಲಕ್ಷ ರೂ. ಚೆಕ್ ಮತ್ತು ಕಿಟ್ ವಿತರಿಸಿ ಅವರು ಮಾತನಾಡಿದರು. ಜೊಲ್ಲೆ ಕುಟುಂಬವು ಎಲ್ಲರಿಗೂ ಸದಾ ಸಹಾಯ ಹಸ್ತ ಚಾಚುವುದರಲ್ಲಿ ಮುಂಚೂಣಿಯಲ್ಲಿದೆ. ಅಭಿವೃದ್ಧಿಗೆ ಜನರೂ ಸಹಕಾರ ನೀಡಿದ್ದಾರೆ ಎಂದರು.
ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಚೇರ್ಮನ್ ಚಂದ್ರಕಾಂತ ಕೋಠಿವಾಲೆ ಮಾತನಾಡಿ, ಜೊಲ್ಲೆ ದಂಪತಿ ಸಾರ್ವಜನಿಕರ ಹಾಗೂ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಅವಿರತವಾಗಿ ಪರಿಶ್ರಮಿಸುತ್ತಿದ್ದಾರೆ. ಅವರ ಕಾರ್ಯವೈಖರಿ ಮೆಚ್ಚುವಂಥದ್ದು ಎಂದರು.
ತಾಲೂಕಿನ ಮಾಂಗೂರ ಶಿವಾಜಿ ಶ್ರೀಪತಿ ಈಚೆಗೆ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದರು. ಅವರ ಪತ್ನಿ ಇಂದುಬಾಯಿ ಕೊರವಿ ಅವರಿಗೆ ಸರ್ಕಾರದಿಂದ 5 ಲಕ್ಷ ರೂ. ಚೆಕ್ ವಿತರಿಸಿದರು. ಸೌಂದಲಗಾ ಗ್ರಾಮದಲ್ಲಿ ಅತಿವೃಷ್ಟಿಯಿಂದ ದನದ ಕೊಟ್ಟಿಗೆ ಕುಸಿದು ಜಾನುವಾರು ಮೃತಪಟ್ಟಿದ್ದಕ್ಕೆ ಮಾಲೀಕ ಸಂದೀಪ ಪಾಟೀಲ ಅವರಿಗೆ ಪರಿಹಾರದ ರೂಪದಲ್ಲಿ 30 ಸಾವಿರ ರೂ. ಚೆಕ್ ಅನ್ನು ಸಚಿವೆ ಜೊಲ್ಲೆ ವಿತರಿಸಿದರು. 16 ಜನರಿಗೆ ವಿವಿಧ ಪಿಂಚಣಿ ಆದೇಶ ಪತ್ರಗಳು, ಕರೊನಾದಿಂದ ಮೃತಪಟ್ಟಿದ್ದ 122 ಜನರ ಕುಟುಂಬಕ್ಕೆ 50 ಸಾವಿರ ರೂ.ನಂತೆ ಕೇಂದ್ರ ಸರ್ಕಾರದ ಪರಿಹಾರಧನ, 64 ಜನರಿಗೆ ಉಚಿತ ಅಡುಗೆ ಕಿಟ್, ಕಾರ್ಮಿಕ ಇಲಾಖೆಯಿಂದ 18 ಪ್ಲಂಬರ್, 10 ಪೇಂಟರ್, 24 ಮನೆ ಕಟ್ಟುವ ಗವಂಡಿಗಳಿಗೆ ಕೆಲಸದ ಕಿಟ್‌ಗಳನ್ನು ಹಾಗೂ 15 ಜನರಿಗೆ ಅವರ ಮಕ್ಕಳ ಮದುವೆ ಕಾರ್ಯಕ್ಕೆ 50 ಸಾವಿರ ರೂ.ನಂತೆ ಧನಸಹಾಯದ ಚೆಕ್‌ಗಳನ್ನು ಸಚಿವೆ ಜೊಲ್ಲೆ ವಿತರಿಸಿದರು.
ಹಾಲಶುಗರ್ ಕಾರ್ಖಾನೆ ಸಂಚಾಲಕ ಆರ್.ವೈ. ಪಾಟೀಲ, ಅವಿನಾಶ ಪಾಟೀಲ, ಅಮಿತ ರಣದಿವೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಭಯ ಮಾನವಿ, ಗಜಾನನ ತಾರಳೆ, ನಗರಸಭೆ ಸ್ಥಾಯಿ ಸಮಿತಿ ಚೇರ್ಮನ್ ರಾಜೇಂದ್ರ ಗುಂದೇಶಾ, ಸದಸ್ಯ ಸಂತೋಷ ಸಾಂಗಾವಕರ, ದೀಪಾಲಿ ಗಿರಿ, ಸದ್ದಾಂ ನಗಾರಜಿ, ಆಶಾ ಟವಳೆ, ದೀಪಕ ಪಾಟೀಲ, ಸೋನಾಲಿ ಉಪಾಧ್ಯೆ, ದತ್ತಾತ್ರೇಯ ಜೋತ್ರೆ, ಪ್ರತಾಪ ಪಟ್ಟಣಶೆಟ್ಟಿ ಇತರರಿದ್ದರು. ಸಾಗರ ಮಿರ್ಜೆ ಸ್ವಾಗತಿಸಿದರು.